
ಬೆಂಗಳೂರು: ಕೋಲಾರದ ವಿಸ್ತ್ರಾನ್ ಕಂಪನಿಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮೇಲ್ವಿಚಾರಕರಾಗಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ನೇಮಕಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆಪಲ್ ಕಂಪನಿಯ ಫೋನ್ ಗಳನ್ನು ತಯಾರಿಸುವ ವಿಸ್ಟ್ರಾನ್ ಕಂಪನಿ ನೌಕರರು ವೇತನ ನೀಡದ ಕಾರಣ ಆಕ್ರೋಶಗೊಂಡು ದಾಂಧಲೆ ನಡೆಸಿದ್ದರು. ಇದರಿಂದಾಗಿ ಭಾರಿ ಪ್ರಮಾಣದ ನಷ್ಟ ಉಂಟಾಗಿತ್ತು. ಈ ಪ್ರಕರಣ ದೇಶ-ವಿದೇಶದ ಗಮನಸೆಳೆದಿತ್ತು. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಖಾನೆಯಲ್ಲಿ ಶೀಘ್ರವೇ ಮತ್ತೆ ಪೂರ್ಣ ಪ್ರಮಾಣದ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.