ಭುವನೇಶ್ವರ: ಶಿಕ್ಷಣಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಓದಬೇಕೆಂಬ ಛಲವೊಂದಿದ್ದರೆ ಸಾಕಷ್ಟೆ. ಒಡಿಶಾದಲ್ಲೊಬ್ಬ ಶಾಸಕ ತಮ್ಮ 56 ನೇ ವಯಸ್ಸಿನಲ್ಲಿ ಹತ್ತನೇ ತರಗತಿ ಪರೀಕ್ಷೆಯನ್ನು ಬರೆಯುವ ಮೂಲಕ ತಮ್ಮ ನಾಲ್ಕು ದಶಕಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಒಡಿಶಾದ ಫುಲ್ಬಾನಿ ಕ್ಷೇತ್ರದ ಬಿಜೆಡಿ ಪಕ್ಷದ ಅಂಗದ ಕನ್ಹಾರ್ ಅವರು ಕೌಟುಂಬಿಕ ಸಮಸ್ಯೆಯಿಂದಾಗಿ 1978 ರಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಹತ್ತನೇ ತರಗತಿ ಪರೀಕ್ಷೆಯನ್ನು ಬರೆಯಬೇಕೆಂಬ ಉತ್ಕಟ ಬಯಕೆ ಅವರದಾಗಿತ್ತಾದರೂ ಸಾಧ್ಯವಾಗಿರಲಿಲ್ಲ.
ಆದರೆ, ಈ ವರ್ಷ ಪರೀಕ್ಷೆಯನ್ನು ಬರೆಯಲೇಬೇಕೆಂಬ ಛಲದಿಂದ ಕನ್ಹಾರ್ ಅವರು, ಈಗ ನಡೆಯುತ್ತಿರುವ ಹತ್ತನೇ ತರಗತಿಯ ಮೊದಲ ದಿನದ ಪರೀಕ್ಷೆಯನ್ನು ಬರೆದಿದ್ದಾರೆ. ಕನ್ಹಾರ್ ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ರುಜಂಗಿ ಪ್ರೌಢಶಾಲೆಯಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ.
ʼನೊಬೆಲ್ʼ ಶಾಂತಿ ಪುರಸ್ಕಾರಕ್ಕೆ ನರೇಂದ್ರ ಮೋದಿ ಹೆಸರು ಪರಿಗಣಿಸಲು ಬಿಎಸ್ಇ ಮುಖ್ಯಸ್ಥರ ಮನವಿ
ನಾನು 1978 ರಲ್ಲಿ 10 ನೇ ತರಗತಿಯಲ್ಲಿದ್ದಾಗ ಕೌಟುಂಬಿಕ ಸಮಸ್ಯೆಗಳಿಂದಾಗಿ ಪರೀಕ್ಷೆ ಬರೆಯಲಾಗಲಿಲ್ಲ. ಇತ್ತೀಚೆಗೆ 50 ವರ್ಷಕ್ಕಿಂತ ಮೇಲ್ಪಟ್ಟವರೂ ಪರೀಕ್ಷೆ ತೆಗೆದುಕೊಳ್ಳಬಹುದು ಎಂಬುದನ್ನು ನನ್ನ ಸ್ನೇಹಿತರಿಂದ ತಿಳಿದುಕೊಂಡೆ. ಆಗ ನಾನು ಈ ಬಾರಿ ಪರೀಕ್ಷೆ ಬರೆಯಬೇಕೆಂದು ನಿರ್ಧರಿಸಿದೆ. ಶಿಕ್ಷಣವನ್ನು ಪಡೆಯಲು ಯಾವುದೇ ವಯಸ್ಸಿನ ಅಡ್ಡಿ ಇರುವುದಿಲ್ಲ ಎಂಬುದನ್ನು ನಾನು ಮನಗಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ವಿಶೇಷವೆಂದರೆ ಕನ್ಹಾರ್ ಅವರೊಂದಿಗೆ ಪರೀಕ್ಷೆ ಬರೆಯುತ್ತಿರುವ ಸ್ನೇಹಿತರಲ್ಲಿ ಒಬ್ಬರು ಸರಪಂಚರಾಗಿದ್ದಾರೆ.