ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಮತ್ತೊಂದು ಬಂಪರ್ ಸುದ್ದಿ ಇಲ್ಲಿದೆ. ಇತ್ತೀಚೆಗಷ್ಟೇ ಟೆಕ್ ದೈತ್ಯ ಇನ್ಫೋಸಿಸ್ 15ರಿಂದ 20 ಸಾವಿರ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿರುವ ಬೆನ್ನಲ್ಲೇ ಇದೀಗ ಮತ್ತೊಂದು ಟೆಕ್ ಕಂಪನಿ ವಿಪ್ರೋ 2025 ನೇ ಸಾಲಿನಲ್ಲಿ 10 ರಿಂದ 12 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೆ ತೀರ್ಮಾನಿಸಿದೆ..
ಈ ನೇಮಕಾತಿ ಪ್ರಕ್ರಿಯೆಯು ಕ್ಯಾಂಪಸ್ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದು, ಮೊದಲ ತ್ರೈಮಾಸಿಕ ಕೊನೆಯಾದ ಜೂನ್ 30, 2024ಕ್ಕೆ ವಿಪ್ರೋ 3,000 ಪ್ರೆಶರ್ ಗಳನ್ನು ಈಗಾಗಲೇ ನೇಮಕ ಮಾಡಿಕೊಂಡಿದೆ. ಐಟಿ ವಲಯದಲ್ಲಿ ಉದ್ಯೋಗಿಗಳ ಕಡಿತ ಮಾಡಲಾಗುತ್ತಿದೆ ಹಾಗೂ ಹೊಸ ನೇಮಕಾತಿ ನಡೆಯುತ್ತಿಲ್ಲ ಎಂಬ ಮಾತುಗಳ ಮಧ್ಯೆ ಈ ಎರಡು ಬೃಹತ್ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿ.
2025 ನೇ ಸಾಲಿನಲ್ಲಿ 10 ರಿಂದ 12 ಸಾವಿರ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿರುವ ವಿಪ್ರೋ, 2026 ನೇ ತ್ರೈಮಾಸಿಕದಲ್ಲೂ ಇಷ್ಟೇ ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸೌರಭ್ ಗೋವಿಲ್ ಜುಲೈ 19 ರಂದು ನಡೆದಿದ್ದ ಕಂಪನಿಯ ಮೊದಲ ತ್ರೈ ಮಾಸಿಕದ ಸಮ್ಮೇಳನದಲ್ಲಿ ಹೇಳಿದ್ದರು. ಇದಾದ ಬಳಿಕ ಈಗ ಹೊಸ ಉದ್ಯೋಗಿಗಳ ನೇಮಕಾತಿಗೆ ಚಾಲನೆ ನೀಡಲಾಗುತ್ತಿದೆ.
ನಾವು ಈಗಾಗಲೇ ಹಲವು ಶೈಕ್ಷಣಿಕ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಕ್ಯಾಂಪಸ್ ಸಂದರ್ಶನದ ಮೂಲಕ ಪ್ರೆಶರ್ ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಆಫ್ ಲೈನ್ ಸಂದರ್ಶನದ ಮೂಲಕವೂ ಈ ಪ್ರಕ್ರಿಯೆ ನಡೆಯಲಿದೆ. 2026 ನೇ ತ್ರೈಮಾಸಿಕದಲ್ಲೂ ಪುನಃ ಹತ್ತರಿಂದ ಹನ್ನೆರಡು ಸಾವಿರ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಸೌರಭ್ ಗೋವಿಲ್ ಮಾಹಿತಿ ನೀಡಿದ್ದಾರೆ.
ಇನ್ನು ಟಿಸಿಎಸ್ ಕೂಡ ಪ್ರಸಕ್ತ ಸಾಲಿನ ತ್ರೈಮಾಸಿಕದಲ್ಲಿ 11,000 ಪ್ರೆಶರ್ ಗಳನ್ನು ನೇಮಕಾತಿ ಮಾಡಿಕೊಂಡಿದ್ದು ಮೈಂಡ್ ಟ್ರೀ ಕೂಡ ತನ್ನ ಉದ್ಯೋಗಿಗಳ ಲಿಸ್ಟಿಗೆ 1,600 ಪ್ರೆಶರ್ ಗಳನ್ನು ಸೇರಿಸಿಕೊಂಡಿದೆ. ಟಿಸಿಎಸ್ 2025 ನೇ ಸಾಲಿನಲ್ಲಿ 40,000 ಪ್ರೆಶರ್ ಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದರೆ, HCL ಟೆಕ್ 10,000 ಪ್ರೆಶರ್ ಷರ್ ಗಳ ನೇಮಕಾತಿ ಮಾಡಲು ನಿರ್ಧರಿಸಿದೆ.