ಚಳಿಗಾಲ ಇನ್ನೇನು ಆರಂಭವಾಗಲಿದೆ. ಚಳಿಗಾಲ ಬಂತೆಂದರೆ ಬೆಚ್ಚಗಿನ ನೀರಿನ ಸ್ನಾನ, ಬೆಚ್ಚನೆಯ ಹೊದಿಕೆ, ಬಿಸಿ ಬಿಸಿ ಟೀ ಇಂತವುಗಳೇ ನೆನಪಿಗೆ ಬರುತ್ತವೆ. ಆದರೆ ಅತಿಯಾದ ಬಿಸಿ ಕೂಡ ನಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ಹಲವರಿಗೆ ತಿಳಿದಿಲ್ಲ.
ಸಾಮಾನ್ಯವಾಗಿ ಬಹಳ ಮಂದಿ ಎಲ್ಲ ಕಾಲದಲ್ಲೂ ಬಿಸಿ ನೀರಿನ ಸ್ನಾನ ಮಾಡುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ನೀರಿನ ಬಿಸಿ ಸ್ವಲ್ಪ ಹೆಚ್ಚಿರುತ್ತದೆ. ಅತಿಯಾದ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ. ಇದ್ರಿಂದ ಚರ್ಮದ ಕಾಂತಿ ಹೊರಟು ಹೋಗುತ್ತದೆ. ಚರ್ಮಕ್ಕೆ ಇನ್ಫೆಕ್ಷನ್ ಆಗುತ್ತದೆ. ಬಿಸಿ ನೀರಿನಿಂದ ಚರ್ಮ ಬೇಗ ಸುಕ್ಕಾಗುತ್ತದೆ. ಕೂದಲಿಗೂ ಅತಿಯಾದ ಬಿಸಿ ನೀರು ಒಳ್ಳೆಯದಲ್ಲ.
ಚಳಿಗಾಲದಲ್ಲಿ ಮೈಯನ್ನು ಬೆಚ್ಚಗಿಡಲು ಜನರು ಒಂದರ ಮೇಲೊಂದು ಬಟ್ಟೆಯನ್ನು ಹಾಕಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ದೇಹ ಅಧಿಕ ಉಷ್ಣತೆಗೆ ಒಳಗಾಗಬಹುದು. ಹೀಗೆ ದೇಹ ಅಧಿಕ ಉಷ್ಣವಾದಾಗ ಇಮ್ಯೂನ್ ಸಿಸ್ಟಮ್ ಕೆಲಸ ಮಾಡುವುದಿಲ್ಲ.
ಶರೀರಕ್ಕೆ ಚಳಿಯಾದಾಗ ಮಾತ್ರ ಮನುಷ್ಯನ ಇಮ್ಯೂನ್ ಸಿಸ್ಟಮ್ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಈ ಬಿಳಿ ರಕ್ತ ಕಣಗಳು ನಮ್ಮ ಶರೀರಕ್ಕಾಗುವ ಇನ್ಫೆಕ್ಷನ್ ಮತ್ತು ಖಾಯಿಲೆಯಿಂದ ನಮ್ಮನ್ನು ಕಾಪಾಡುತ್ತವೆ.
ಚಳಿಯನ್ನು ಓಡಿಸಲು ಜನರು ಬಿಸಿ ಬಿಸಿ ಟೀ, ಕಾಫಿಯನ್ನು ಹೆಚ್ಚು ಕುಡಿಯಲು ಆರಂಭಿಸುತ್ತಾರೆ. ಟೀ, ಕಾಫಿಯಲ್ಲಿ ಕೆಫೀನ್ ಇರುತ್ತದೆ. ಶರೀರದಲ್ಲಿ ಇದು ಹೆಚ್ಚಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಆಗುವುದರಿಂದ ಜನರು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ನೀರನ್ನು ಕಡಿಮೆ ಕುಡಿಯುವುದರಿಂದ ಶರೀರ ಡಿ ಹೈಡ್ರೇಟ್ ಆಗಿ ಕಿಡ್ನಿ ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಚಳಿಗಾಲದಲ್ಲಿ ಹೆಚ್ಚು ಕ್ಯಾಲೊರಿ ಉಪಯೋಗವಾಗುವುದರಿಂದ ಹಸಿವು ಹೆಚ್ಚುತ್ತದೆ. ಇದರಿಂದ ಜನರು ಹೆಚ್ಚು ಆಹಾರ ಸೇವನೆ ಮಾಡುತ್ತಾರೆ. ಇದು ಕೂಡ ಒಳ್ಳೆಯದಲ್ಲ.
ಚರ್ಮದ ರಕ್ಷಣೆಗೆಂದು ಮತ್ತೆ ಮತ್ತೆ ಕೋಲ್ಡ್ ಕ್ರೀಮ್ ಗಳನ್ನು ಹಚ್ಚುವುದು ತಪ್ಪು. ಹೀಗೆ ಮಾಡುವುದರಿಂದ ಕ್ರೀಮ್ ಮೇಲೆ ಧೂಳು, ಕೀಟಾಣುಗಳು ಕುಳಿತು ನಿಮ್ಮ ಚರ್ಮಕ್ಕೆ ಹಾನಿ ಉಂಟುಮಾಡಬಹುದು.
ಬಟ್ಟೆಯನ್ನು ಮನೆಯ ಒಳಗೆ ಒಣಗಿಸುವುದರಿಂದ ಅನೇಕ ಆರ್ಗಾನಿಕ್ ಕಂಪೌಂಡ್ ಗಳು ಬಿಡುಗಡೆಯಾಗುತ್ತವೆ. ಇದರಿಂದ ಮಕ್ಕಳಿಗೆ ಮತ್ತು ವಯಸ್ಕರಿಗೆ ಉಸಿರಾಡಲು ತೊಂದರೆಯಾಗಬಹುದು.