ಚಳಿಗಾಲ ಬರ್ತಾ ಇದೆ. ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ಸ್ವೆಟರ್, ಟೋಪಿ, ಹೀಟರ್, ಬಿಸಿ ಬಿಸಿ ಚಹಾ ಎಲ್ಲವೂ ಬೇಕು. ಯಾಕಂದ್ರೆ ಚಳಿಗಾಲದಲ್ಲಿ ನೆಗಡಿ, ಅಸ್ತಮಾ, ಕೆಮ್ಮು, ಖಿನ್ನತೆ, ಹೃದಯಾಘಾತದಂತಹ ಸಮಸ್ಯೆಗಳು ಕಾಡುವುದು ಜಾಸ್ತಿ. ಹಾಗಾಗಿ ಚಳಿಗಾಲದಲ್ಲಿ ಕಾಡುವ ಪ್ರಮುಖ ಸಮಸ್ಯೆಗಳು, ಅವುಗಳಿಂದ ಪಾರಾಗೋದು ಹೇಗೆ ಅನ್ನೋದನ್ನು ನೋಡೋಣ.
ನೆಗಡಿ, ಜ್ವರ : ಚಳಿಗಾಲದಲ್ಲಿ ಬಿಸಿಲು ಕಡಿಮೆ, ಹಾಗಾಗಿ ವಿಟಮಿನ್ ಡಿ ಕೊರತೆ ಸಾಮಾನ್ಯ. ಬೇಗ ವೈರಸ್ ಅಟ್ಯಾಕ್ ಆಗಿಬಿಡುತ್ತದೆ. ಇದರಿಂದ ನೆಗಡಿ, ಜ್ವರ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಬ್ಲೂಬೆರಿ, ಬ್ರೊಕೊಲಿ, ಶುಂಠಿ, ಪುದೀನಾವನ್ನು ಹೆಚ್ಚಾಗಿ ಸೇವಿಸಿ.
ಒಣ ಚರ್ಮ : ಹ್ಯೂಮಿಡಿಟಿ ಮಟ್ಟ ಕಡಿಮೆಯಾಗುವುದರಿಂದ ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ತುರಿಕೆ ಶುರುವಾಗುತ್ತದೆ, ಚರ್ಮ ಒಡೆದು ರಕ್ತ ಸಹ ಬರಬಹುದು. ಕೆಲವೊಮ್ಮೆ ಮಾಯಿಶ್ಚರೈಸರ್ ಹಚ್ಚಿದ್ರೂ ಈ ಸಮಸ್ಯೆಗಳು ಬಗೆಹರಿಯುವುದಿಲ್ಲ. ಹಾಗಾಗಿ ಚಳಿಗಾಲದಲ್ಲಿ ಹಾರ್ಡ್ ಸೋಪ್ ಮತ್ತು ಡಿಟರ್ಜಂಟ್ ಗಳನ್ನು ಬಳಸಬೇಡಿ.
ಅಸ್ತಮಾ : ಚಳಿಗಾಲದಲ್ಲಿ ಅಲರ್ಜಿ ಸಮಸ್ಯೆ ಹೆಚ್ಚು. ನೆಗಡಿಯಾಗಿದ್ರೆ ಅದೇ ಅಸ್ತಮಾಕ್ಕೆ ತಿರುಗಬಹುದು. ಒಣ ಹಾಗೂ ಚಳಿಗಾಳಿಯಿಂದ ಅಸ್ತಮಾ ಜಾಸ್ತಿಯಾಗುವ ಅಪಾಯ ಹೆಚ್ಚು. ಹಾಗಾಗಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಿ. ಆದಷ್ಟು ಬಿಸಿ ನೀರನ್ನೇ ಕುಡಿಯಿರಿ.