ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗತೊಡಗಿದೆ. ಕಳೆದ ಮೂರು ದಿನಗಳಿಂದ ಅನೇಕ ಜಿಲ್ಲೆಗಳಲ್ಲಿ ಸರಾಸರಿ ಉಷ್ಣಾಂಶ 6 ರಿಂದ 9 ಡಿಗ್ರಿ ಸೆಲ್ಸಿಯಸ್ ನಷ್ಟು ಕುಸಿತವಾಗಿದೆ. ಬೆಂಗಳೂರಿನಲ್ಲಿ ಕೂಡ ಕನಿಷ್ಠ ತಾಪಮಾನ ದಾಖಲಾಗಿದೆ.
ಕಳೆದ ಮೂರು ದಿನಗಳಿಂದ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಅನೇಕ ಜಿಲ್ಲೆಗಳ ಜನ ತತ್ತರಿಸಿದ್ದಾರೆ. ಮಧ್ಯ ಮತ್ತು ಪೂರ್ವ ಫೆಸಿಪಿಕ್ ಮಹಾಸಾಗರದಲ್ಲಿ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿದ್ದು, ಇದರ ಪರಿಣಾಮ ಈಶಾನ್ಯ ಮಾರುತಗಳು ದುರ್ಬಲವಾಗಿ ಚಳಿ ಜಾಸ್ತಿಯಾಗಿದೆ ಎನ್ನಲಾಗಿದೆ.
ಉತ್ತರ ಭಾಗದಿಂದ ದಕ್ಷಿಣ ಕಡೆಗೆ ಗಾಳಿ ಬೀಸಿದರೆ ಚಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಚಳಿಯ ತೀವ್ರತೆ ಹೆಚ್ಚಾಗಿದ್ದು ಬೆಳಗಿನ ಸಂದರ್ಭದಲ್ಲಿ ಜನ ಮನೆಯಿಂದ ಹೊರ ಬರದಂತಾಗಿದೆ. ಅನೇಕ ಕಡೆ ಮಂಜು ಮುಸುಕಿದ ವಾತಾವರಣ ಕಂಡುಬಂದಿದೆ.
ಚಳಿಯಿಂದ ಪಾರಾಗಲು ಮೂಲೆ ಸೇರಿಕೊಂಡಿದ್ದ ಬೆಚ್ಚನೆಯ ಹೊದಿಕೆ, ಟೋಪಿ, ಉಡುಪುಗಳನ್ನು ಹುಡುಕಿ ಧರಿಸುವಂತಾಗಿದೆ. ಇನ್ನು ಅಲ್ಲಲ್ಲಿ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುವ ದೃಶ್ಯ ಕಂಡುಬಂದಿದೆ. ಚಳಿಯ ತೀವ್ರತೆ ಕಾರಣ ಬಿಸಿ ಕಾಫೀ, ಟೀ ಕುಡಿಯುವ ಪ್ರಮಾಣ ಜಾಸ್ತಿಯಾಗಿದೆ. ಇದರೊಂದಿಗೆ ಸಿಗರೇಟ್, ಬೀಡಿ, ಮದ್ಯಕ್ಕೂ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.