ಕೇರಳದಿಂದ ಸೌದಿ ಅರೇಬಿಯಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ವಿಂಡ್ಶೀಲ್ಡ್ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಏರ್ ಇಂಡಿಯಾ ವಿಮಾನವು ಬೆಳಗ್ಗೆ 7:52ಕ್ಕೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಇದಾದ ಬಳಿಕ ವಿಂಡ್ಶೀಲ್ಡ್ನಲ್ಲಿ ಬಿರುಕು ಕಾಣಿಸಿರೋದು ಪೈಲಟ್ಗಳ ಗಮನಕ್ಕೆ ಬಂದಿದೆ. ಹೀಗಾಗಿ ತಿರುವನಂತಪುರಂಗೆ ಹಿಂದಿರುಗಿದ ವಿಮಾನವು 8:50ಕ್ಕೆ ತುರ್ತು ಭೂಸ್ಪರ್ಶ ಮಾಡಿದೆ.
ಕೊರೊನಾ ವೈರಸ್ ನಿರ್ಬಂಧದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದು ಬಂದಿದೆ. ವಿಮಾನದಲ್ಲಿ ಕೇವಲ 8 ಮಂದಿ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ವಿಮಾನದಲ್ಲಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿರುವನಂತಪುರಂ ವಿಮಾನ ನಿಲ್ದಾಣ ನಿರ್ದೇಶಕ ಸಿ.ವಿ. ರವೀಂದ್ರನ್ ಮಾಹಿತಿ ನೀಡಿದ್ದಾರೆ.