ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿ ಕೊಟ್ವಾಲಿ ಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ ವೃದ್ಧನೊಬ್ಬ ಟ್ರಾಫಿಕ್ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಸಂಚಾರ ನಿಯಮ ಉಲ್ಲಂಘನೆಗಾಗಿ ಟ್ರಾಫಿಕ್ ಪೊಲೀಸರು ವ್ಯಕ್ತಿಯ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ ನಂತರ ಮಂಗಳವಾರ ಈ ಘಟನೆ ನಡೆದಿದೆ, ಇದು ಇಬ್ಬರ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು.
ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ಟ್ರಾಫಿಕ್ ಅಧಿಕಾರಿಗೆ ‘ಇನ್ನೊಮ್ಮೆ ವಾಹನ ನಿಲ್ಲಿಸಿದರೆ ಚಾಕುವಿನಿಂದ ಇರಿದು ಹಾಕುತ್ತೇನೆ’ ಎಂದು ಬೆದರಿಸಿದ್ದಾನೆ. ಇದೇ ವೇಳೆ ಮತ್ತೊಬ್ಬ ಟ್ರಾಫಿಕ್ ಪೊಲೀಸ್ ಘಟನೆಯ ಸಂಪೂರ್ಣ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ನಂತರ ಸಂಚಾರಿ ಪೊಲೀಸ್ ಅಧಿಕಾರಿ, ವೃದ್ಧನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಚಂದೌಸಿ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ʼಲೈವ್ ಹಿಂದೂಸ್ತಾನ್ʼ ವರದಿಯ ಪ್ರಕಾರ, ಟ್ರಾಫಿಕ್ ಅಧಿಕಾರಿ ದೇವೇಂದ್ರ ಅವರು ತಮ್ಮ ಸಹೋದ್ಯೋಗಿ ಕುನಾಲ್ ಅವರೊಂದಿಗೆ ಲಾಲ್ ಪೆಟ್ರೋಲ್ ಪಂಪ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇಬ್ಬರು ಸವಾರರಿದ್ದ ಬೈಕ್ ನಿಲ್ಲಿಸಿದ್ದಾರೆ.
ಸವಾರರಿಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ದೇವೇಂದ್ರ ಅವರು ಬೈಕ್ ಸವಾರ, ಮೊಹಲ್ಲಾ ಕಗ್ಜಿ ನಿವಾಸಿ ರಹೀಶ್ ಅಹಮದ್ ಅವರಿಗೆ ಹೆಲ್ಮೆಟ್ ಇಲ್ಲದೆ ಮತ್ತು ಚಾಲನಾ ಪರವಾನಗಿ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಿದ್ದಾರೆ. ಇದರಿಂದ ಕೋಪಗೊಂಡ ರಹೀಶ್ ಅಹ್ಮದ್ ಮತ್ತು ಪಿಲಿಯನ್ ರೈಡರ್ ಇಬ್ಬರೂ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಚಾಕುವಿನಿಂದ ಇರಿದು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಕುನಾಲ್ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ಇಬ್ಬರೂ ನಿಂದನೆಯನ್ನು ಮುಂದುವರೆಸಿದ್ದರು. ನಂತರ ದೇವೇಂದ್ರ ಅವರು ರಹೀಶ್ ಅಹ್ಮದ್ ಮತ್ತು ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.