ನವದೆಹಲಿ: ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ್ತಿಯಲ್ಲಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಬಲಬೀರ್ ಸಿಂಗ್ ಮತ್ತು ಪ್ರಕರಣದಲ್ಲಿ ವಿವಿಧ ರಾಜ್ಯಗಳಿಂದ ಹಾಜರಾಗಿದ್ದ ಇತರೆ ಹಿರಿಯ ವಕೀಲರು ಸೇರಿದಂತೆ ಎಲ್ಲ ಕಡೆಯ ವಿಚಾರಣೆಯನ್ನು ನಡೆಸಿದೆ. ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿದ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಉನ್ನತ ಹುದ್ದೆಗಳು ಸಿಗುತ್ತಿಲ್ಲ. ಹೀಗಾಗಿ ಬಡ್ತಿಯಲ್ಲಿ ಮೀಸಲಾತಿ ಅನಿವಾರ್ಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಾತ್ರವಲ್ಲ, ಎಲ್ಲ ರಾಜ್ಯಗಳಲ್ಲಿಯೂ ಬಡ್ತಿ ಮೀಸಲಾತಿ ನೀಡುವ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಬೇಕೆಂದು ಹೇಳಿದೆ.
ಸುಪ್ರೀಂಕೋರ್ಟ್ ಬಡ್ತಿ ಮೀಸಲಾತಿ ನೀಡುವ ಕುರಿತಂತೆ ಆದೇಶ ಹೊರಡಿಸಿದೆ. ಆದರೆ ನಿಯಮಗಳಲ್ಲಿನ ಗೊಂದಲಗಳಿಂದಾಗಿ ರಾಜ್ಯಗಳಲ್ಲಿ ಮೀಸಲಾತಿ ನೀಡಿಲ್ಲ. 75 ವರ್ಷಗಳ ನಂತರವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಉನ್ನತ ಜಾತಿಗಳ ಅರ್ಹತೆಯ ಮಟ್ಟಕ್ಕೆ ತರಲು ಸಾಧ್ಯವಾಗಿಲ್ಲ ಎಂಬುದು ‘ಜೀವನದ ಸತ್ಯ’ ಎಂದು ಕೇಂದ್ರವು ಅಕ್ಟೋಬರ್ 6 ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.