ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಬಿಹಾರದ ನಿತೀಶ್ ಕುಮಾರ್ ಹಾಗೂ ಆಂಧ್ರಪ್ರದೇಶದ ಚಂದ್ರಬಾಬು ಅವರುಗಳ ಪಕ್ಷದ ಬೆಂಬಲದ ಮೇಲೆ ಮೂರನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಂತಿದೆ. ಹೀಗಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾದರೆ ಮಿತ್ರ ಪಕ್ಷಗಳೊಂದಿಗೆ ಸಮಾಲೋಚಿಸುವುದು ಅನಿವಾರ್ಯವಾಗಿದೆ.
ಈ ಹಿಂದೆ ಲ್ಯಾಟರಲ್ ಎಂಟ್ರಿ ಮೂಲಕ ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದ ಕೇಂದ್ರ ಲೋಕಸೇವಾ ಆಯೋಗ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಜಾಹೀರಾತನ್ನು ಹಿಂಪಡೆದುಕೊಂಡಿತ್ತು. ಲ್ಯಾಟರಲ್ ಎಂಟ್ರಿಗೆ ಪ್ರತಿಪಕ್ಷಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದವಾದರೂ ಆರಂಭದಲ್ಲಿ ಅದಕ್ಕೆ ಮಣಿಯದ ಕೇಂದ್ರ ಸರ್ಕಾರ, ಮಿತ್ರ ಪಕ್ಷಗಳ ಕೆಲ ನಾಯಕರಿಂದಲೇ ಅಪಸ್ವರ ಕೇಳಿ ಬಂದ ಕಾರಣ ಇದಕ್ಕೆ ತಡೆ ಹಾಕಲಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದ್ದು, ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲು ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿರುವ ಕಾರಣ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ಸಂಸತ್ತಿನ ಜಂಟಿ ಸಮಿತಿಯನ್ನು ರಚಿಸಿದ್ದು, ಇದರ ಮೊದಲ ಸಭೆ ಗುರುವಾರ ನಡೆದಿದೆ.
ಈ ಮಸೂದೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ ವ್ಯಕ್ತಪಡಿಸುತ್ತಿದ್ದು, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ತಮ್ಮ ಪಕ್ಷಗಳು ವಕ್ಫ್ (ತಿದ್ದುಪಡಿ) ಮಸೂದೆಯನ್ನು ವಿರೋಧಿಸುತ್ತವೆ ಎಂದು ಭರವಸೆ ನೀಡಿದ್ದಾರೆಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಮನಿ ಹೇಳಿದ್ದು, ಹೀಗಾಗಿ ಮೋದಿ ಸರ್ಕಾರದ ಮಹತ್ವದ ನಿರ್ಧಾರದ ವಿರುದ್ಧ ಮಿತ್ರ ಪಕ್ಷಗಳ ಈ ನಾಯಕರು ಹೋಗಲಿದ್ದಾರಾ ಎಂಬ ಕುತೂಹಲ ಮನೆ ಮಾಡಿದೆ.