ಹೈದರಾಬಾದ್: ರಾಜಕಾರಣಿಯೊಬ್ಬರ ಹಸ್ತಕ್ಷೇಪದಿಂದ ಆಂಧ್ರಪ್ರದೇಶ ರಣಜಿ ತಂಡದ ನಾಯಕತ್ವ ಕಳೆದುಕೊಂಡಿರುವುದನ್ನು ಹಿರಿಯ ಬ್ಯಾಟರ್ ಹನುಮ ವಿಹಾರಿ ತಡವಾಗಿ ಬಹಿರಂಗಪಡಿಸಿದ್ದಾರೆ.
ಆತ್ಮಗೌರವಕ್ಕೆ ಧಕ್ಕೆ ತಂದ ಆಂಧ್ರ ರಾಜ್ಯದ ಪರ ಇನ್ನೆಂದು ಕಣಕ್ಕಿಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶದ ಎದುರು ಕ್ವಾರ್ಟರ್ ಫೈನಲ್ ನಲ್ಲಿ ವಿರೋಚಿತ ಸೋಲು ಕಂಡ ಬಳಿಕ ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪ್ರಸ್ತುತ ರಣಜಿ ಟೂರ್ನಿಯಲ್ಲಿ ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ಹನುಮ ವಿಹಾರಿ ನಾಯಕರಾಗಿದ್ದರು. ಪಂದ್ಯದ ವೇಳೆ ತಂಡದ 17ನೇ ಆಟಗಾರನ ವಿರುದ್ಧ ಕೂಗಾಡಿದ ನಂತರ ಆತ ಪ್ರಭಾವಿ ರಾಜಕಾರಣಿಯಾದ ತನ್ನ ತಂದೆಯ ಬಳಿ ಹನುಮ ವಿಹಾರಿ ಬಗ್ಗೆ ದೂರು ನೀಡಿದ್ದ.
ಹನುಮ ವಿಹಾರಿ ವಿರುದ್ಧ ಕ್ರಮ ಕೈಗೊಳ್ಳಲು ರಾಜಕಾರಣಿ ಕ್ರಿಕೆಟ್ ಅಸೋಸಿಯೇಷನ್ ಗೆ ಸೂಚನೆ ನೀಡಿದ್ದರು. ಅಸೋಸಿಯೇಷನ್ ನಾಯಕತ್ವ ಕಸಿದುಕೊಂಡರೂ ಕ್ರಿಕೆಟ್ ಮತ್ತು ತಂಡದ ಮೇಲಿನ ಪ್ರೀತಿಯಿಂದ ಹಾಲಿ ಋತುವಿನಲ್ಲಿ ಆಡುವುದನ್ನು ಹನುಮ ವಿಹಾರಿ ಮುಂದುವರಿಸಿದ್ದರು. ಇನ್ನು ಮುಂದೆ ಅವರು ಆಂಧ್ರ ರಾಜ್ಯದ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.