ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಚೆನ್ನೈನ ನಿವಾಸದಿಂದ ಹಿಮಾಲಯಕ್ಕೆ ಒಂದು ವಾರದ ಆಧ್ಯಾತ್ಮಿಕ ಪ್ರವಾಸಕ್ಕೆ ತೆರಳಿದ್ದಾರೆ. ಪ್ರತಿ ವರ್ಷ ತಮ್ಮ ಚಿತ್ರದ ಶೂಟಿಂಗ್ ಮುಗಿದ ನಂತರ ಹಿಮಾಲಯಕ್ಕೆ ಹೋಗುವ ಅಭ್ಯಾಸ ಹೊಂದಿರುವ ಅವರು ಈ ಬಾರಿಯೂ ಧ್ಯಾನಕ್ಕೆ ತೆರಳಿದ್ದಾರೆ.
ಈ ವೇಳೆ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ನೆರೆದಿದ್ದ ಪತ್ರಕರ್ತರ ಗುಂಪೊಂದು ಈ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಗೆಲ್ಲುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ರಜನಿಕಾಂತ್ ನಗುತ್ತಲೇ ‘ದಯವಿಟ್ಟು ರಾಜಕೀಯ ಪ್ರಶ್ನೆ ಬೇಡ’ ಎಂದು ಹೇಳಿದರು.
ಕಾಲಿವುಡ್‌ನಲ್ಲಿ ಸಂಗೀತ ಸಂಯೋಜಕ ಇಳಯರಾಜ ಮತ್ತು ತಮಿಳು ಸಾಹಿತಿ ವೈರಮುತ್ತು ನಡುವೆ ನಡೆಯುತ್ತಿರುವ ಶೀತಲ ಸಮರದ ಬಗ್ಗೆ ಕೇಳಿದ ಪ್ರಶ್ನೆಗೂ “ನೋ ಕಾಮೆಂಟ್ಸ್” ಎಂದು ಉತ್ತರಿಸಲು ರಜನಿಕಾಂತ್ ನಿರಾಕರಿಸಿದರು.
ತಮ್ಮ ಮುಂಬರುವ ಸಿನಿಮಾ ವೆಟ್ಟೈಯಾನ್ ಕುರಿತು ಮಾತನಾಡಿದ ಅವರು, ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದರು. ವೆಟ್ಟೈಯಾನ್ ರಜನಿಕಾಂತ್ ಅವರು ನಾಯಕ ನಟನಾಗಿ ಅಭಿನಯಿಸಿರುವ 170 ನೇ ಚಿತ್ರವಾಗಿದ್ದು ಬರುವ ಅಕ್ಟೋಬರ್ ತಿಂಗಳಲ್ಲಿ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.
ನಟ ರಜನಿಕಾಂತ್ ‘ಜಯಭೀಮ್’ ಖ್ಯಾತಿಯ ಗಣವೇಲ್ ನಿರ್ದೇಶನದ ‘ವೆಟ್ಟೈಯಾನ್’ ಚಿತ್ರೀಕರಣವನ್ನು ಪೂರ್ಣಗೊಳಿಸಿ ಕಳೆದ ವಾರ ವಿಶ್ರಾಂತಿಗಾಗಿ ಅಬುಧಾಬಿಗೆ ತೆರಳಿದ್ದರು. ಅಲ್ಲಿಂದ ಚೆನ್ನೈಗೆ ಮರಳಿದ ನಂತರ ಒಂದು ವಾರ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಹಿಮಾಲಯಕ್ಕೆ ತೆರಳಿದ್ದಾರೆ.
ಮೂಲಗಳ ಪ್ರಕಾರ ಒಂದು ವಾರದ ಆಧ್ಯಾತ್ಮಿಕ ಯಾತ್ರೆ ಮುಗಿಸಿ ಜೂನ್ ಮೊದಲ ವಾರದಲ್ಲಿ ರಜನಿಕಾಂತ್ ಚೆನ್ನೈಗೆ ಮರಳಲಿದ್ದಾರೆ. ಅದರ ನಂತರ ರಜನಿ, ಲೋಕೇಶ್ ಕನಕರಾಜ್ ಅವರೊಂದಿಗೆ ‘ಕೂಲಿ’ ಚಿತ್ರದಲ್ಲಿ ನಟಿಸಲಿದ್ದಾರೆ.