ನವದೆಹಲಿ: ರಿಯಾಯಿತಿಗಳನ್ನು ನೀಡುವುದರಿಂದ ರೈಲ್ವೆ ಮೇಲೆ ವೆಚ್ಚ ಹೊರೆಯಾಗುತ್ತದೆ, ಆದ್ದರಿಂದ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರಿಗೆ ರಿಯಾಯಿತಿಯ ವ್ಯಾಪ್ತಿಯನ್ನು ವಿಸ್ತರಿಸುವುದು ಅಪೇಕ್ಷಣೀಯವಲ್ಲ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ಸವಾಲುಗಳ ನಡುವೆಯೂ ಭಾರತೀಯ ರೈಲ್ವೇಯು ವಿಕಲಚೇತನರು, ಹನ್ನೊಂದು ವರ್ಗದ ರೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ನಾಲ್ಕು ವಿಭಾಗಗಳಿಗೆ ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಮುಂದುವರೆಸಿದೆ ಎಂದು ಅವರು ಹೇಳಿದರು.
ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗವು ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದಾಗ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ನಿಲ್ಲಿಸಲಾಯಿತು.
ಸಂಸತ್ ನಲ್ಲಿ ಮಾತನಾಡಿದ ರೈಲ್ವೇ ಸಚಿವರು, ನಾಲ್ಕು ವರ್ಗದ ವಿಕಲಾಂಗ ವ್ಯಕ್ತಿಗಳು, 11 ವರ್ಗದ ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಸವಾಲುಗಳ ನಡುವೆಯೂ ರಿಯಾಯಿತಿಯನ್ನು ಮುಂದುವರೆಸಲಾಗಿದೆ. ಆದಾಗ್ಯೂ, ಉಳಿದವರಿಗೆ ರಿಯಾಯಿತಿಗಳನ್ನು ಮರುಸ್ಥಾಪಿಸುವುದು ಸದ್ಯಕ್ಕೆ ಅಪೇಕ್ಷಣೀಯವಲ್ಲ ಎಂದು ಹೇಳಿದರು.
ಸಾಂಕ್ರಾಮಿಕ ರೋಗದ ಹಿಂದಿನ ಮೂರು ವರ್ಷಗಳಲ್ಲಿ ಹಿರಿಯ ನಾಗರಿಕರಿಗೆ ನೀಡಲಾದ ರಿಯಾಯಿತಿಯ ಡೇಟಾ ಹಂಚಿಕೊಂಡಿದ್ದು, 2017-18, 2018-19 ಮತ್ತು 2019-20 ರ ಅವಧಿಯಲ್ಲಿ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ವರ್ಗಗಳಿಗೆ 4,794 ಕೋಟಿ ರೂ. ನೀಡಲಾಗಿದೆ. ರೈಲ್ವೆಯು ಈಗಾಗಲೇ ಎಲ್ಲಾ ಪ್ರಯಾಣಿಕರಿಗೆ ಪ್ರಯಾಣದ ವೆಚ್ಚದ ಶೇಕಡ 50 ಕ್ಕಿಂತ ಹೆಚ್ಚು ಭರಿಸುತ್ತಿದೆ, ಏಕೆಂದರೆ ರೈಲು ಕಡಿಮೆ ಪ್ರಯಾಣ ದರ ಹೊಂದಿದೆ ಎಂದು ಅವರು ಹೇಳಿದ್ದಾರೆ.