ಈಗಿರುವ ಕರೆನ್ಸಿ ನೋಟುಗಳ ಮೇಲಿರುವ ಗಾಂಧಿ ಚಿತ್ರವನ್ನು ಬದಲಾಯಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನೋಟುಗಳ ಮೇಲಿನ ಚಿತ್ರಗಳ ಬದಲಾವಣೆಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಹಣಕಾಸು ಸಚಿವಾಲಯ ಆರ್.ಬಿ.ಐ. ನಿಲುವನ್ನು ಪುನರುಚ್ಚರಿಸಿದೆ.
ಭಾರತೀಯ ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಒಳಗೊಂಡಂತೆ ಹೆಚ್ಚಿನ ಚಿತ್ರಗಳನ್ನು ಸೇರಿಸಲು ಸರ್ಕಾರವು ಯಾವುದೇ ವಿನಂತಿಯನ್ನು ಸ್ವೀಕರಿಸಿದೆಯೇ ಎಂದು ಕಾಂಗ್ರೆಸ್ ಸದಸ್ಯ ಆಂಟೋನಿ ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಭಾರತೀಯ ನೋಟುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಣ್ಯ ವ್ಯಕ್ತಿಗಳು, ದೇವರು ಮತ್ತು ದೇವತೆಗಳು, ಪ್ರಾಣಿಗಳು ಇತ್ಯಾದಿಗಳ ಚಿತ್ರಗಳನ್ನು ಸೇರಿಸಲು ಹಲವಾರು ಮನವಿಗಳನ್ನು ಸ್ವೀಕರಿಸಲಾಗಿದೆ. ಆದರೆ ಕರೆನ್ಸಿ ನೋಟುಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರವನ್ನು ತೆಗೆದುಹಾಕುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕರೆನ್ಸಿ ನೋಟುಗಳ ಮೇಲಿನ ಚಿತ್ರಗಳಿಗೆ ಸಂಬಂಧಿಸಿದಂತೆ ಹಲವಾರು ವಿನಂತಿಗಳು/ ಸಲಹೆಗಳನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಆರ್.ಬಿ.ಐ ಜೂನ್ 06, 2022 ರಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ಬ್ಯಾಂಕ್ ನೋಟುಗಳಲ್ಲಿ ಯಾವುದೇ ಬದಲಾವಣೆ ತರುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ.