ಯಾವುದೇ ಮುಸ್ಲಿಂ ಕುಟುಂಬದಲ್ಲಿ ಈಗ 10 ಮಕ್ಕಳಿರುವುದನ್ನು ತೋರಿಸಿದರೆ, ಆ ವ್ಯಕ್ತಿಗೆ 11 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಎನ್ ಸಿ ಪಿ ಶಾಸಕ ಜಿತೇಂದ್ರ ಅವ್ಹಾದ್ ಸವಾಲು ಎಸೆದಿದ್ದಾರೆ. ಮುಸ್ಲಿಂ ಕುಟುಂಬದಲ್ಲೀಗ ಇಂತಹ ಸ್ಥಿತಿ ಇಲ್ಲ. ಇನ್ನು ಮುಂದೆಯೂ ಇಂತಹ ವಿಷಯದ ಪ್ರಸ್ತಾಪವಾಗುವುದಿಲ್ಲ. ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದರು.
ಹಿಂದೂ, ಮುಸ್ಲಿಂ, ಸಿಖ್ಖ್ ಅಥವಾ ಬೌದ್ಧರ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲಿಯೂ ಹೆಚ್ಚು ಏನನ್ನೂ ಬರೆಯಲಾಗಿಲ್ಲ ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಬಣದ ಶಾಸಕ ಜಿತೇಂದ್ರ ಅವ್ಹಾದ್ ಹೇಳಿದ್ದಾರೆ.
‘ಹಮಾರೆ ಬಾರಾ’ ಚಿತ್ರದ ವಿರುದ್ಧ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಕೆಲವರು ಧಾರ್ಮಿಕ ಪುಸ್ತಕವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ. ಖುರಾನ್ ದೇವರ ಪುಸ್ತಕವಾಗಿದೆ, ಈ ಜನರು ಅದರ ಮಾಹಿತಿಯನ್ನು ತಪ್ಪಾಗಿ ಪ್ರಸ್ತುತಪಡಿಸುವ ಮೂಲಕ ಚಲನಚಿತ್ರ ನಿರ್ಮಾಣ ಮಾಡಿ ಆನಂದಿಸುತ್ತಾರೆ. ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿ ಬಿ ಎಫ್ ಸಿ) ಯು ಜವಾಬ್ದಾರಿಯಿಂದ ವರ್ತಿಸಿ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.