ಐಪಿಎಲ್ ಟೂರ್ನಿ ಅಂತ್ಯವಾಗಿರೋದ್ರಿಂದ ಎಲ್ಲರ ಗಮನವೀಗ ಟಿ20 ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿದೆ. ಈ ಬಾರಿಯಾದರೂ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬೇಕೆಂಬುದು ಅಭಿಮಾನಿಗಳ ಕನಸು. ಭಾರತದ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಕೊನೆಯ ಟೂರ್ನಿ ಇದು. ಟಿ20 ವಿಶ್ವಕಪ್ ಬಳಿಕ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಅವರ ಸ್ಥಾನಕ್ಕೆ ಟೀಂ ಇಂಡಿಯಾ ಹೊಸ ಕೋಚ್ ನೇಮಕ ಮಾಡಲಿದೆ. ಈ ಹುದ್ದೆಗೆ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ.
ಮೂಲಗಳ ಪ್ರಕಾರ ಗಂಭೀರ್ ಮತ್ತು ಬಿಸಿಸಿಐ ನಡುವಣ ಒಪ್ಪಂದ ಅಂತಿಮವಾಗಿದೆಯಂತೆ. ಗಂಭೀರ್ ಶೀಘ್ರದಲ್ಲೇ ಭಾರತದ ತರಬೇತುದಾರರಾಗಿ ನೇಮಕವಾಗಲಿದ್ದಾರೆ ಎಂದು ಹೇಳಲಾಗ್ತಿದೆ. ಕೋಚ್ ಆಗಲಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ತಿಳಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನಾಂಕವಾಗಿತ್ತು. ಯಾರ್ಯಾರು ಅರ್ಜಿ ಹಾಕಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಗಂಭೀರ್ ದೇಶಕ್ಕೆ ಮೊದಲ ಆದ್ಯತೆ ನೀಡುತ್ತಾರೆ ಮತ್ತು ಆದ್ದರಿಂದ ಅವರು ಫ್ರಾಂಚೈಸಿ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸುತ್ತಾರೆ ಎಂಬ ವದಂತಿಯಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಗಂಭೀರ್ ನಡುವೆ ಈ ಕುರಿತಂತೆ ಮಾತುಕತೆಯೂ ನಡೆದಿದೆಯಂತೆ.
ಭಾರತೀಯ ಕೋಚ್ ಹುದ್ದೆ ನಿಭಾಯಿಸಲು ಸುಮಾರು 10 ತಿಂಗಳು ಪ್ರಯಾಣ ಮಾಡಬೇಕಾಗುತ್ತದೆ. ಹಾಗಾಗಿ ಇದು ಸವಾಲಿನ ಕೆಲಸ. ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗಿನ ಎರಡು ತಿಂಗಳ ಅವಧಿಯಲ್ಲಿ ಗಂಭೀರ್ ಐದು ಬಾರಿ ವಿರಾಮ ತೆಗೆದುಕೊಂಡಿದ್ದಾರಂತೆ. ಹಾಗಾಗಿ ಟೀಂ ಇಂಡಿಯಾ ತರಬೇತುದಾರ ಹುದ್ದೆ ಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಸವಾಲು ಕೂಡ ಇದೆ. ಭಾರತದ ಕೋಚ್ ಆಗಿ ಅಧಿಕಾರಾವಧಿ ಮುಗಿದ ಬಳಿಕ ಗಂಭಿರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಲಾಗ್ತಿದೆ.
ಈ ಬಗ್ಗೆ ಗಂಭೀರ್, ಕೆಕೆಆರ್ ಮಾಲೀಕ ಶಾರುಖ್ ಖಾನ್‌ಗೆ ಕೂಡ ಮಾಹಿತಿ ನೀಡಿದ್ದಾರಂತೆ. ಆದರೆ ಟೀಂ ಇಂಡಿಯಾದ ಕೋಚ್ ಹುದ್ದೆಗೆ ಗಂಭೀರ್ ಹೆಸರು ಅಂತಿಮವಾಗಿರುವ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.