ಕಲಬುರ್ಗಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಕಲಬುರ್ಗಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಶಾಸಕಿ ಖನೀಜ್ ಫಾತಿಮಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇದೀಗ ರಾಜಕೀಯ ವಾಗ್ದಾಳಿಗೂ ಕಾರಣವಾಗುತ್ತಿದ್ದು, ಸುದ್ದಿಗಾರರೊಂದಿಗೆ ಮಾತನಾಡಿದ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ನಾನು ವಿಧಾನಸೌಧದಲ್ಲಿಯೇ ಹಿಜಾಬ್ ಧರಿಸಿ ಕೂರುತ್ತೇನೆ. ಧೈರ್ಯವಿದ್ದರೆ ಯಾರಾದರೂ ತಡೆಯಲಿ ನೋಡೋಣ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ನಾಯಕರು ಇಂಥಹ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಇಷ್ಟು ವರ್ಷ ಹಿಜಾಬ್ ಧರಿಸಿ ಶಾಲೆ-ಕಾಲೇಜಿಗೆ ಬಂದರೆ ವಿವಾದವಾಗಿಲ್ಲ ಈಗ ಏಕೆ ಅವಕಾಶ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಹಿಜಾಬ್ ಧರಿಸಲು ಅವಕಾಶ ಕೊಡಬೇಕು. ಉಡುಪಿಯಲ್ಲಿ ವಿದ್ಯಾರ್ಥಿನಿಯರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುತ್ತೇನೆ. ಸಾಧ್ಯವಾದರೆ ನಾನೇ ಖುದ್ದು ಉಡುಪಿಗೆ ಹೋಗಿ ವಿದ್ಯಾರ್ಥಿನಿಯರ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.