ಮೋದಿ ಉಪನಾಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಗುಜರಾತಿನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಇದೇ ಕಾರಣಕ್ಕಾಗಿ ಸಂಸದ ಸ್ಥಾನದಿಂದಲೂ ಅನರ್ಹಗೊಂಡಿದ್ದಾರೆ. ಇದರ ಮಧ್ಯ ಇದೀಗ ಕಾಂಗ್ರೆಸ್ ನಾಯಕನೊಬ್ಬ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವ ಬೆದರಿಕೆ ಹಾಕಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ತಮಿಳುನಾಡಿನ ದಿಂಡಿಗಲ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಎಸ್.ಸಿ / ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ಮಣಿಕಂಠನ್ ಈ ಬೆದರಿಕೆ ಹಾಕಿದ್ದು, ಇದೀಗ ಅವರ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ದಿಂಡಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಣಿಕಂಠನ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ, ನ್ಯಾಯಮೂರ್ತಿ ವರ್ಮಾ ತಿಳಿದುಕೊಳ್ಳಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನಿಮ್ಮ ನಾಲಿಗೆಯನ್ನು ಕತ್ತರಿಸಲಾಗುತ್ತದೆ ಎಂದಿದ್ದರು. ಈ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ಈಗ ಮಣಿಕಂಠನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.