ನವದೆಹಲಿ: ದಂಪತಿಯಲ್ಲಿ ಯಾರೇ ಆದರೂ ಉದ್ದೇಶಪೂರ್ವಕವಾಗಿ ಲೈಂಗಿಕ ಬಯಕೆ ನಿರಾಕರಿಸಿದಲ್ಲಿ ಅದು ಹಿಂಸೆಗೆ ಸಮಾನ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಲೈಂಗಿಕತೆ ಇಲ್ಲದ ವೈವಾಹಿಕ ಬಂಧನ ಪರಿಪೂರ್ಣವಲ್ಲ. ವೈವಾಹಿಕ ಜೀವನಕ್ಕೆ ಲೈಂಗಿಕ ಬಾಂಧವ್ಯದಲ್ಲಿನ ಅತೃಪ್ತಿಯಷ್ಟು ಅಪಾಯಕಾರಿ ಬೇರೆ ಯಾವುದೂ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಡೈವೋರ್ಸ್ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಹಿಳೆ ಒಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನೇತೃತ್ವದ ಪೀಠ ವಿಚ್ಛೇದನ ನೀಡಿರುವುದನ್ನು ಎತ್ತಿ ಹಿಡಿದಿದೆ.
2004 ರಲ್ಲಿ ಹಿಂದೂ ಸಂಪ್ರದಾಯದಂತೆ ದಂಪತಿಯ ಮದುವೆ ನಡೆದಿದ್ದು, ಮದುವೆಯಾದ 35 ದಿನಗಳಲ್ಲಿ ಪತ್ನಿ ತವರಿಗೆ ವಾಪಸ್ ತೆರಳಿದ್ದು, ಗಂಡನ ಮನೆಗೆ ವಾಪಸ್ ಬಂದಿರಲಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. ಈ ಪ್ರಕರಣದಲ್ಲಿ ಇದನ್ನು ಒಂದು ಪರಿಪೂರ್ಣ ಮದುವೆ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ವಿರುದ್ಧ ಆಧಾರ ರಹಿತವಾಗಿ ವರದಕ್ಷಿಣೆ ದೂರು ಸಲ್ಲಿಸಿರುವುದು ಕೂಡ ಕ್ರೌರ್ಯ ಎಂದು ನ್ಯಾಯಾಲಯ ಹೇಳಿದೆ.