ನವದೆಹಲಿ: ಜನವಸತಿ ಮೇಲೆ ಆಗಾಗ್ಗೆ ಆನೆಗಳ ದಾಳಿಯಂತಹ ಸಮಸ್ಯೆಯನ್ನು ಪರಿಹರಿಸಲು ಕಾರಿಡಾರ್ ನಿರ್ವಹಣಾ ಯೋಜನೆಯನ್ನು ತಯಾರಿಸಲು ಭಾರತೀಯ ವನ್ಯಜೀವಿ ಸಂಸ್ಥೆ ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರು ಹೇಳಿದ್ದಾರೆ.
ವಯನಾಡಿನಲ್ಲಿ ಇತ್ತೀಚೆಗೆ ಮೂರು ಜೀವಗಳನ್ನು ಬಲಿ ಪಡೆದಿರುವ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ಹಿನ್ನೆಲೆಯಲ್ಲಿ ಕರೆದಿದ್ದ ಕಂದಾಯ ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮಾನವ ಮತ್ತು ವನ್ಯಜೀವಿ ಎರಡನ್ನೂ ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಮುಖ್ಯ ವನ್ಯಜೀವಿ ವಾರ್ಡನ್‌ಗೆ ಸಮಸ್ಯಾತ್ಮಕ ಕಾಡುಪ್ರಾಣಿಗಳನ್ನು ಕೊಲ್ಲಲು ಆದೇಶ ನೀಡಲು ಅಧಿಕಾರವಿದ್ದು, ಇದನ್ನು ರಾಜ್ಯ ಸರ್ಕಾರಗಳು ಶ್ರದ್ಧೆಯಿಂದ ಮತ್ತು ಎಚ್ಚರಿಕೆಯಿಂದ ರೈತ ಸಮುದಾಯ ಮತ್ತು ಬೆಳೆಗಳನ್ನು ರಕ್ಷಿಸಲು ಬಳಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವನ್ಯಜೀವಿ ದಾಳಿಯ ಸಂತ್ರಸ್ತರಿಗೆ ಪರಿಹಾರವನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪಾರದರ್ಶಕ ಕಾರ್ಯವಿಧಾನ ಮತ್ತು ಪ್ರೋಟೋಕಾಲ್ ಅನ್ನು ರಚಿಸುವಂತೆ ಕೇಂದ್ರ ಸಚಿವರು ಕೇರಳ ಸರ್ಕಾರಕ್ಕೆ ತಿಳಿಸಿದ್ದಾರೆ.