ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ‘ಗೃಹಿಣಿ’ ಎಂಬ ಕಾರಣಕ್ಕೆ ಆಕೆಗೆ ಸೂಕ್ತ ಪರಿಹಾರ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ಕೇರಳದ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಲ್ಲದೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಿದ್ದಕ್ಕೆ ಕೇರಳ ರಸ್ತೆ ಸಾರಿಗೆ ನಿಗಮವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪರಿಹಾರ ನೀಡುವಾಗ ಉದ್ಯೋಗಸ್ಥ ಮಹಿಳೆ, ಗೃಹಿಣಿ ಎಂಬ ಮಾನದಂಡಗಳನ್ನು ಇರಿಸಿಕೊಳ್ಳಬಾರದು ಎಂದು ಅಭಿಪ್ರಾಯ ಪಟ್ಟಿದೆ.
ಪ್ರಕರಣದ ವಿವರ: 2006ರಲ್ಲಿ ಕೇರಳ ಸರ್ಕಾರಿ ಬಸ್ ಚಾಲಕನ ನಿರ್ಲಕ್ಷದಿಂದಾಗಿ ಸಂಭವಿಸಿದ ಅಪಘಾತದ ವೇಳೆ ಮಹಿಳೆಯೊಬ್ಬರ ಬೆನ್ನು ಮೂಳೆಗೆ ಗಂಭೀರ ಗಾಯಗಳಾಗಿದ್ದು, ಹಲವು ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದರು.
ಬಳಿಕ ಅವರು ತಮಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದು, ಆದರೆ ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಆಕೆ ಗೃಹಿಣಿ ಎಂಬ ಕಾರಣಕ್ಕೆ 40,000 ರೂಪಾಯಿ ಪರಿಹಾರವನ್ನು ನೀಡಲು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು, ಮಹಿಳೆ ಕುಟುಂಬಕ್ಕಾಗಿ ತನ್ನೆಲ್ಲ ಸಮಯವನ್ನು ಮೀಸಲಾಗಿರಿಸಿರುತ್ತಾರೆ ಅಲ್ಲದೆ ಮಕ್ಕಳ ಭವಿಷ್ಯಕ್ಕಾಗಿ ಆಕೆ ಶ್ರಮಿಸುತ್ತಾರೆ. ಹೀಗಾಗಿ ಅವರನ್ನು ಗೃಹಿಣಿ ಎಂದು ಕ್ಷುಲ್ಲಕವಾಗಿ ಕಾಣಲಾಗುವುದಿಲ್ಲ ಎಂದು ಹೇಳಿದರು.