ಬೆಂಗಳೂರು: ಪತ್ನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪಿಎಸ್ಐ ರಮೇಶ್ ಅವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಗೂರು ಪೊಲೀಸ್ ಠಾಣೆಯಲ್ಲಿ ರಮೇಶ್ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಬೇಗೂರಿನ ಪಟೇಲ್ ಲೇಔಟ್ ನಲ್ಲಿ ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಪತ್ನಿ ಶಿಲ್ಪಾ ಮೃತದೇಹ ಪತ್ತೆಯಾಗಿದ್ದು, ರಮೇಶ್ ಕೊಲೆ ಮಾಡಿರುವುದಾಗಿ ಶಿಲ್ಪಾ ಪೋಷಕರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ರಮೇಶ್ ಅವರನ್ನು ಬಂಧಿಸಲಾಗಿದೆ.
ಕೋಲಾರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಮೇಶ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಲ್ಪಾ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದು, ಪ್ರೀತಿಸುತ್ತಿದ್ದರು. ಮದುವೆಗೆ ಪೋಷಕರ ವಿರೋಧವಿದ್ದ ಕಾರಣ ರಮೇಶ್ 11 ತಿಂಗಳ ಹಿಂದೆ ಶಿಲ್ಪಾ ಅವರನ್ನು ರಿಜಿಸ್ಟ್ರರ್ ಮದುವೆಯಾಗಿ ಜೀವನ ನಡೆಸುತ್ತಿದ್ದರು.
ಮದುವೆಯ ನಂತರ ಪಟೇಲ್ ಲೇಔಟ್ ನಲ್ಲಿ ದಂಪತಿ ನೆಲೆಸಿದ್ದು, ಬೇಗೂರು ಠಾಣೆಯಲ್ಲಿ ಪಿಎಸ್ಐ ಆಗಿ ರಮೇಶ್ ಕಾರ್ಯನಿರ್ವಹಿಸುತ್ತಿದ್ದರು. ಕೌಟುಂಬಿಕ ವಿಚಾರದ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ರಮೇಶ್ ಮನೆಯಿಂದ ಹೊರಗೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಶನಿವಾರ ಬೆಳಗ್ಗೆ ಮನೆಗೆ ಮರಳಿದಾಗ ಒಳಗಿನಿಂದ ಪತ್ನಿ ಪ್ರತಿಕ್ರಿಯಿಸಿಲ್ಲ. ಬಾಗಿಲು ಬಡಿದರೂ, ಮೊಬೈಲ್ ಕರೆ ಮಾಡಿದರೂ ಉತ್ತರ ಬಂದಿಲ್ಲ. ಇದರಿಂದ ಅನುಮಾನಗೊಂಡು ಮನೆ ಮಾಲೀಕರು ಹಾಗೂ ನೆರೆಹೊರೆಯವರೊಂದಿಗೆ ಬಾಗಿಲು ಒಡೆದು ಒಳಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶಿಲ್ಪಾ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಶಿಲ್ಪಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶಿಲ್ಪಾ ಅನುಮಾನಾಸ್ಪದ ಸಾವಿನ ಬಗ್ಗೆ ತಂದೆ ದೂರು ನೀಡಿದ್ದು, ಅವರನ್ನು ರಮೇಶ್ ಅವರನ್ನು ಬಂಧಿಸಲಾಗಿದೆ.