ಬದುಕಿನ ದುರಂತವೆಂಬಂತೆ ನಾಪತ್ತೆಯಾದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ಪೈಲಟ್‌ನ ಪತ್ನಿಯು 1912 ರಲ್ಲಿ ದುರಂತಕ್ಕೀಡಾದ ಟೈಟಾನಿಕ್ ಹಡಗಿನಲ್ಲಿ ಸಾವನ್ನಪ್ಪಿದ ದಂಪತಿಯ ಸಂಬಂಧಿಕರೆಂಬುದು ಗೊತ್ತಾಗಿದೆ.
ನಾಪತ್ತೆಯಾಗಿರುವ ಜಲಾಂತರ್ಗಾಮಿ ಪೈಲಟ್ ನ ಪತ್ನಿ ವೆಂಡಿ ರಶ್ ಅವರು 1912 ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಮುಳುಗಿದಾಗ ಸಾವನ್ನಪ್ಪಿದ ಅಮೆರಿಕ ದಂಪತಿಯ ವಂಶಸ್ಥರು. ಆ ದಂಪತಿಗಳು ಜೇಮ್ಸ್ ಕ್ಯಾಮರೂನ್ ಅವರ ಹಾಲಿವುಡ್ ಚಲನಚಿತ್ರ ‘ಟೈಟಾನಿಕ್’ ನಲ್ಲಿಯೂ ಅಮರರಾಗಿದ್ದಾರೆ.
ವೆಂಡಿ ರಶ್ ಚಿಲ್ಲರೆ ವ್ಯಾಪಾರಿ ಐಸಿಡೋರ್ ಸ್ಟ್ರಾಸ್ ಮತ್ತು ಅವರ ಪತ್ನಿ ಇಡಾ ಅವರ ಮರಿ ಮೊಮ್ಮಗಳು. ಸ್ಟ್ರಾಸ್ ಮತ್ತು ಇಡಾ ಅವರು ಪ್ರಥಮ ದರ್ಜೆ ಪ್ರಯಾಣಿಕರಾಗಿ 1912ರ ಏಪ್ರಿಲ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಮುಳುಗಿದ ನಂತರ ಸಾವನ್ನಪ್ಪಿದರು. ಸ್ಟ್ರಾಸ್ 1845 ರಲ್ಲಿ ಜನಿಸಿದರು ಮತ್ತು ಮ್ಯಾಕಿಯ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಸಹ-ಮಾಲೀಕರಾಗಿದ್ದರು ಎಂದು ʼದಿ ನ್ಯೂಯಾರ್ಕ್ ಟೈಮ್ಸ್ʼ ವರದಿ ಮಾಡಿದೆ.
1986 ರಲ್ಲಿ ವೆಂಡಿ ರಶ್ ಟೈಟಾನಿಕ್ ಟೂರಿಸ್ಟ್ ಸಬ್‌ಮರ್ಸಿಬಲ್ ಅನ್ನು ನಿರ್ವಹಿಸುವ ಓಷನ್‌ಗೇಟ್‌ನ CEO ಸ್ಟಾಕ್‌ಟನ್ ರಶ್ ಅವರನ್ನು ವಿವಾಹವಾದರು. ಟೈಟಾನಿಕ್ ಅವಶೇಷಗಳನ್ನು ತೋರಿಸಲು ಪ್ರವಾಸಿಗರನ್ನು ಕರೆದೊಯ್ತಿದ್ದ ಜಲಾಂತರ್ಗಾಮಿಯಲ್ಲಿ 18 ರಂದು ನಾಪತ್ತೆಯಾಗಿದ್ದು ಅದರಲ್ಲಿ ಸ್ಟಾಕ್ ಟನ್ ರಶ್ ಪೈಲಟ್ ಆಗಿದ್ದರು.
ಕಾಣೆಯಾದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರ ಪೈಕಿ ಸ್ಟಾಕ್‌ಟನ್ ರಶ್ ಸೇರಿದ್ದಾರೆ. ಜಲಾಂತರ್ಗಾಮಿ ಇದುವರೆಗೂ ಪತ್ತೆಯಾಗದೇ ಆತಂಕ ಮೂಡಿಸಿದೆ.
ಟೈಟಾನಿಕ್ ದುರಂತದಲ್ಲಿ ಸಾವನ್ನಪ್ಪಿದ ದಂಪತಿಗಳ ವಂಶಸ್ಥರಾದ ವೆಂಡಿ ರಶ್ ಅವರು ಓಷನ್‌ಗೇಟ್ ನ ಸಂವಹನ ನಿರ್ದೇಶಕರಾಗಿದ್ದಾರೆ.
ದಾಖಲೆಗಳ ಪ್ರಕಾರ ಮಂಜುಗಡ್ಡೆಗೆ ಡಿಕ್ಕಿ ಹೊಡೆದ ನಂತರ ಮುಳುಗುತ್ತಿದ್ದ ಟೈಟಾನಿಕ್ ಹಡಗಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಇದ್ದುದರಿಂದ ಇಸಿಡೋರ್ ಸ್ಟ್ರಾಸ್ ಲೈಫ್ ಬೋಟ್‌ನಲ್ಲಿ ಕೂರಲಿಲ್ಲ. ಅವರು ತನ್ನ ಹೆಂಡತಿಯೊಂದಿಗಿದ್ದರು, ದುರಂತಕ್ಕೀಡಾದ ಹಡಗು ಮುಳುಗುವವರೆಗೂ ಪತ್ನಿಯ ತೋಳು ಹಿಡಿದು ಒಟ್ಟಿಗೆ ನಿಂತಿದ್ದರು ಎನ್ನಲಾಗಿದೆ.
ಕೆಲವು ವರದಿಗಳು ಹೇಳುವಂತೆ ಇಡಾ ಸ್ಟ್ರಾಸ್ ತನ್ನ ಮಿಂಕ್ ಜಾಕೆಟ್ ಅನ್ನು ತನ್ನ ಸೇವಕಿಗೆ ಹಸ್ತಾಂತರಿಸಿದರು, ಆಕೆಯನ್ನು ಲೈಫ್ ಬೋಟ್‌ನಲ್ಲಿ ರಕ್ಷಿಸಲಾಯಿತು.
ಟೈಟಾನಿಕ್ ಮುಳುಗಿದ ಹಲವಾರು ವಾರಗಳ ನಂತರ ಸ್ಟ್ರಾಸ್‌ನ ಅವಶೇಷಗಳು ಸಮುದ್ರದಲ್ಲಿ ಕಂಡುಬಂದರೂ, ಅವನ ಹೆಂಡತಿಯ ದೇಹವು ಎಂದಿಗೂ ಕಂಡುಬಂದಿಲ್ಲ.