
ಬೆಂಗಳೂರು: ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಟೆಕ್ಕಿ ಪತಿಯನ್ನು ಮಹಾರಾಷ್ಟ್ರದ ಪುಣೆ ಬಳಿ ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆತಂದಿದ್ದಾರೆ.
ಪತ್ನಿಯನ್ನೇ ಕೊಂದ ಹಂತಕ ಟೆಕ್ಕಿ ಪತಿ ರಾಕೇಶ್ ನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದು, ಕೋರಮಂಗಲ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಆರೋಪಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ರಾಕೇಶ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ನಾಳೆ ಪೊಲೀಸರು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಪತ್ನಿ ಹತ್ಯೆ ಬಳಿಕ ತನ್ನದೇ ಕಾರಿನಲ್ಲಿ ಪುಣೆಯತ್ತ ಹೊರಟಿದ್ದ ಆರೋಪಿ, ಮಹಾರಾಷ್ಟ್ರದ ಗಡಿ ಕಾಗಲ್ ಬಳಿ ವಿಷ ಖರೀದಿಸಿದ್ದ. ಬಳಿಕ ಶಿರವಾಲ್ ಗೆ ಹೋಗುವ ದಾರಿಯಲ್ಲಿ ಖಂಬಟ್ಟಿ ಎಂಬಲ್ಲಿ ಕಾರು ನಿಲ್ಲಿಸಿ ಕಾರಿನಲ್ಲಿಯೇ ವಿಷ ಸೇವಿಸಿದ್ದ. ಈತನನ್ನು ನೋಡಿದ ಬೈಕ್ ಸವಾರ ಬೈಕ್ ನಿಲ್ಲಿಸಿ ವಿಚಾರಿಸಿದಾಗ ತಾನು ಕೊಲೆ ಮಾಡಿ ಬಂದಿದ್ದಾಗಿ ಹಾಗೂ ವಿಷ ಸೇವಿಸಿರುವುದಾಗಿ ಹೇಳಿದ್ದಾನೆ. ತಕ್ಷಣ ಬೈಕ್ ಸವಾರ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆರೋಪಿ ರಾಕೇಶ್ ಕುಟುಂಬದ ವಿರೋಧದ ನಡುವೆಯೂ ತನ್ನ ಅತ್ತೆಯ ಮಗಳು ಗೌರಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದ. ಕ್ಷುಲ್ಲಕ ಕಾರಣಕ್ಕೆ ಈಗ ಪತ್ನಿಯನ್ನೇ ಹತ್ಯೆಗೈದಿದ್ದಾನೆ.