ಬೆಂಗಳೂರು: ಎರಡನೇ ಪತ್ನಿಯ ಕೊಂದು ಮೂರನೇ ಮದುವೆಯಾಗಲು ಮುಂದಾಗಿದ್ದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸರ್ಜಾಪುರದಲ್ಲಿ ಇತ್ತೀಚೆಗೆ ನಡೆದಿದ್ದ ಅಪರಿಚಿತ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.
ಬಿಹಾರ ಮೂಲಕ ಮೊಹಮ್ಮದ್ ನಸೀಮ್(39) ಬಂಧಿತ ಆರೋಪಿ. ರುಮೇಶ್ ಖಾತುನ್(22) ಕೊಲೆಯಾದ ಮಹಿಳೆ. ಈಕೆ ನಸೀಮ್ ಗೆ ಎರಡನೇ ಪತ್ನಿಯಾಗಿದ್ದಳು. ಸರ್ಜಾಪುರದಲ್ಲಿ ಪೇಂಟರ್ ಕೆಲಸ ಮಾಡುತ್ತಿದ್ದ ನಸೀಮ್ ಮೊದಲ ಪತ್ನಿಗೆ ಮೂವರು ಮಕ್ಕಳು. ಎರಡನೇ ಪತ್ನಿಗೆ ಮೂವರು ಮಕ್ಕಳಿದ್ದರು. ದಂಪತಿ ಜೊತೆಗೆ ಮೊದಲ ಪತ್ನಿಯ ಮೂವರು, ಎರಡನೇ ಪತ್ನಿಯ ಒಬ್ಬ ಮಗ ಇದ್ದ. ಪತ್ನಿಯ ಶೀಲ ಶಂಕಿಸಿ ಪದೇಪದೇ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ನಸೀಮ್ ನವೆಂಬರ್ 11ರಂದು ಪತ್ನಿಯೊಂದಿಗೆ ಜಗಳವಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಹಗ್ಗದಿಂದ ಕೈಕಾಲು ಕಟ್ಟಿ ಪತ್ನಿಯನ್ನು ಕೊಂದು ವಿವಸ್ತ್ರಗೊಳಿಸಿ ಚರಂಡಿಗೆ ಎಸೆದಿದ್ದಾನೆ. ನಂತರ ನಾಲ್ವರು ಮಕ್ಕಳನ್ನು ಕರೆದುಕೊಂಡು ಬಿಹಾರದ ತಲೆಮರೆಸಿಕೊಂಡಿದ್ದ.
ಶವ ಕೊಳೆತು ದುರ್ವಾಸನೆ ಬಂದಾಗ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಪರಿಚಿತ ಮಹಿಳೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದರು. ಆರೋಪಿಯ ಜಾಡು ಹಿಡಿದು ಬಿಹಾರಕ್ಕೆ ತೆರಳಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಆರೋಪಿ ನಸೀಮ್ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಮದುವೆ ಮನೆಯಲ್ಲಿಯೇ ಆತನನ್ನು ಬಂಧಿಸಿ ಸರ್ಜಾಪುರಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.