ಬೆಂಗಳೂರು: ಪತ್ನಿ ಬೆತ್ತಲೆಗೊಳಿಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಒಡಿಶಾದ ಮಯೂರ್ ಬಂಜ್ ಜಿಲ್ಲೆಯ ಚನ್ನು ಹನ್ಸದ್ ಶಿಕ್ಷೆಗೆ ಒಳಗಾದ ವ್ಯಕ್ತಿ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020 ರ ಜುಲೈ 22 ರಂದು ನಡೆದ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಧೀಶ ಎಸ್. ಶ್ರೀಧರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗಳಾದ ರಾಜ ಮತ್ತು ಮಹದೇವ ಗಡದ ಅವರು ವಾದ ಮಂಡಿಸಿದ್ದರು.
ಚನ್ನು ಹನ್ಸದ್ ಎರಡನೇ ಮದುವೆಯಾಗಿದ್ದ. ಮಹಿಳೆಗೂ ಅದು ಎರಡನೇ ಮದುವೆಯಾಗಿದ್ದು, ಬೆಂಗಳೂರಿನ ದೊಡ್ಡಹುಲ್ಲೂರು ಗ್ರಾಮದಲ್ಲಿ ನೆಲೆಸಿದ್ದರು. ಕಾರ್ಮಿಕರ ಶೆಡ್ ನಲ್ಲಿ ದಂಪತಿ ವಾಸವಾಗಿದ್ದು, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿ ಯುವಕರೊಂದಿಗೆ ಪತ್ನಿ ಮಾತನಾಡುವುದನ್ನು ನೋಡಿ ಶೀಲದ ಬಗ್ಗೆ ಶಂಕಿಸಿ ಕೊಲೆ ಹನ್ಸದ್ ಮಾಡಿದ್ದ.
2020ರ ಜುಲೈ 22ರಂದು ಪತ್ನಿಯೊಂದಿಗೆ ಜಗಳವಾಡಿ ಬಟ್ಟೆ ತೆಗೆದು ಬೆತ್ತಲೆಗೊಳಿಸಿದ್ದ. ಎದೆ ಹಾಗೂ ದೇಹದ ಹಲವು ಭಾಗಗಳಿಗೆ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಹೊಸಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಇನ್ಸ್ ಪೆಕ್ಟರ್ ವಿ.ಡಿ. ಶಿವರಾಜು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.