ಶಿವಮೊಗ್ಗ: ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ಕೊಲೆ ಮಾಡಿದ ಗಂಡ ಮತ್ತು ಆತನ ಗೆಳೆಯರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಮತ್ತು ತಲಾ 1 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ನಗರದ ವೆಂಕಟೇಶ್ವರ ನಗರದ 5ನೇ ಕ್ರಾಸ್ ನಿವಾಸಿ ಕೃಷ್ಣಮೂರ್ತಿ ಅವರ ಮಗ ಕಾರ್ತಿಕ್ ಕೆ.(28) ಇವರು ಶ್ರೀರಾಮನಗರದ ವಾಸಿ ಆರ್. ಪೊನ್ನುಸ್ವಾಮಿ ಇವರ ಸಾಕುಮಗಳು ರೇವತಿ(21) ವರ್ಷ ಶಿವಮೊಗ್ಗ ಇವರನ್ನು 2017 ರ ಸೆ. 4 ರಂದು ಮದುವೆಯಾಗಿದ್ದರು.
ಪತ್ನಿ ರೇವತಿ ಕಾರ್ತಿಕನೊಂದಿಗೆ ಜಗಳ ಆಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ತನ್ನ ಪತ್ನಿ ರೇವತಿಯು ತನ್ನ ಮನೆಯ ಎದುರು ಇರುವ ವಿಜಯ ಎಂಬುವನನ್ನು ಪ್ರೀತಿಸುತ್ತಿದ್ದರಿಂದ ಮನೆ ಬಿಟ್ಟು ಹೋಗಿರುತ್ತಾಳೆಂದು ಆರೋಪಿ ಕಾರ್ತಿಕ ತನ್ನ ಗೆಳೆಯರಾದ 2ನೇ ಆರೋಪಿ ಭರತ್ ವಿ.(23), 3ನೇ ಆರೋಪಿ ಸತೀಶ್(26) ಮತ್ತು 4ನೇ ಆರೋಪಿ ಸಂದೀಪ(21) ಇವರೊಂದಿಗೆ ಸೇರಿಕೊಂಡು 2017 ರ ಅ. 1 ರಂದು ತನ್ನ ಪತ್ನಿ ಮತ್ತು ವಿಜಯನನ್ನು ವಡ್ಡಿನಕೊಪ್ಪಕ್ಕೆ ಕರೆಸಿಕೊಂಡು ಮಚ್ಚು, ಲಾಂಗು ಮತ್ತು ಕಲ್ಲಿನಿಂದ ಥಳಿಸಿ ಕೊಲೆ ಮಾಡಿದ್ದರು.
ಈ ಬಗ್ಗೆ ಶಿವಮೊಗ್ಗ ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಮಹಾಂತೇಶ್ ಬಿ ಹೊಳಿ ಅವರು ತನಿಖೆ ಪೂರೈಸಿ ಆರೋಪಿಗಳಾದ ಕಾರ್ತಿಕ್, ಭರತ್, ಸತೀಶ್, ಸಂದೀಪ್ ಇವರುಗಳ ವಿರುದ್ದ ಭಾ.ದಂ.ಸಂಹಿತೆ ಕಲಂ 302, 120(ಬಿ)ಸಹವಾಚಕ 34 ರಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾಖಲಾಗಿ ವಿಚಾರಣೆ ನಡೆದು, ಆರೋಪಗಳು ದೃಢಪಟ್ಟಿರುವುದರಿಂದ ಆರೋಪಿತರಿಗೆ 1ನೇ ಮತ್ತು 3ನೇ ಅಪರ ಜಿಲ್ಲಾ ಮತ್ತು ನ್ಯಾಯಾಧೀಶರಾದ ಕೆ.ಎಸ್. ಮಾನು ಅವರು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದ 3ನೇ ಆರೋಪಿ ಸತೀಶ್ ಬಿನ್ ಗೋವಿಂದರಾಜ ತಲೆಮರೆಸಿಕೊಂಡಿರುವುದರಿಂದ ಈತನನ್ನು ಪ್ರಕರಣದಿಂದ ಪ್ರತ್ಯೇಕಿಸಿ, ಪ್ರತ್ಯೇಕ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು ಈತನ ಮೇಲಿನ ವಿಚಾರಣೆ ಬಾಕಿ ಇರುತ್ತದೆ.
ಸರ್ಕಾರಿ ಅಭಿಯೋಜಕರಾದ ಜೆ.ಶಾಂತರಾಜ್ ಸರ್ಕಾರದ ಪರವಾಗಿ ಸಾಕ್ಷಿಗಳ ವಿಚಾರಣೆ ಮಾಡಿ ವಾದವನ್ನು ಮಂಡಿಸಿದ್ದರು.