ಭೋಪಾಲ್: ಕೆಲಸ ಬಿಡುವಂತೆ ಪತ್ನಿಯ ಮೇಲೆ ಒತ್ತಡ ಹಾಕುವುದು ಕೂಡ ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಲಸ ಬಿಟ್ಟು ತನ್ನ ಆದ್ಯತೆ ಹಾಗೂ ಜೀವನಶೈಲಿಗೆ ಅನುಗುಣವಾಗಿ ಬದುಕಬೇಕು ಎಂದು ಪತ್ನಿಯನ್ನು ಒತ್ತಾಯಿಸುವುದು ಕ್ರೌರ್ಯವಾಗುತ್ತದೆ ಎಂದು ತಿಳಿಸಿದೆ.
ಕೆಲಸ ಬಿಡು ಎಂದು ಒತ್ತಡ ಹೇರಿದ ಪತಿಯ ವರ್ತನೆಯಿಂದ ಬೇಸತ್ತು ವಿಚ್ಛೇದನ ಕೋರಿದ ಮಹಿಳೆಯ ಅರ್ಜಿಯ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ಸುಶ್ರೂರ್ ಧರ್ಮಾಧಿಕಾರಿ ಅವರಿದ್ದ ವಿಭಾಗೀಯ ಪೀಠ, ಪತಿಯಾಗಲಿ ಅಥವಾ ಪತ್ನಿಯಾಗಲಿ ತಮ್ಮ ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ಕೆಲಸ ಬಿಡುವಂತೆ ಸಂಗಾತಿಯನ್ನು ಒತ್ತಾಯಿಸುವ ಹಕ್ಕು ಹೊಂದಿಲ್ಲವೆಂದು ತಿಳಿಸಿದೆ.
ಒಟ್ಟಿಗೆ ವಾಸಿಸುವ ನಿರ್ಧಾರ ಸಂಗಾತಿಗಳ ಪರಸ್ಪರ ಆಯ್ಕೆಯ ವಿಷಯವಾಗಿದೆ. ತಮ್ಮ ಇಚ್ಛೆಯಂತೆ ಉದ್ಯೋಗ ಮಾಡಬೇಕು, ಇಲ್ಲವೇ ಮಾಡಬಾರದು ಎಂದು ಯಾರೂ ಒತ್ತಾಯಿಸುವಂತಿಲ್ಲ. ಕೆಲಸ ಬಿಟ್ಟು ತಮ್ಮ ಇಚ್ಛೆಯ ಶೈಲಿಯಂತೆ ಬದುಕಬೇಕೆಂದು ಒತ್ತಡ ಹಾಕುವುದು ಕ್ರೌರ್ಯಕ್ಕೆ ಸಮನಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.