ಕೊಪ್ಪಳ: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಭಾಗ್ಯನಗರದ ಜನತಾ ಕಾಲೋನಿಯಲ್ಲಿ ನಡೆದಿದೆ.
ರೇಣುಕಾ(25) ಕೊಲೆಯಾದ ಮಹಿಳೆ. ಪತಿ ಅನಿಲ್ ಸಂಗಟಿ ಕೊಲೆ ಆರೋಪಿಯಾಗಿದ್ದಾನೆ. 4 ವರ್ಷದ ಹಿಂದೆ ಿಬ್ಬರ ಮದುವೆಯಾಗಿದ್ದು, ಮದುವೆಯಾಗಿ 6 ತಿಂಗಳ ನಂತರ ಅನಿಲ್ ದಿನವೂ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಬೇರೆಯವರೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದೀಯ ಎಂದು ಪತ್ನಿಯ ಶೀಲ ಶಂಕಿಸಿ ಹಲ್ಲೆ ಮಾಡುತ್ತಿದ್ದ. ಗಂಡನ ದೈಹಿಕ ಮಾನಸಿಕ ಕಿರುಕುಳದಿಂದ ನೊಂದು ರೇಣುಕಾ ತವರು ಮನೆಯವರಿಗೆ ವಿಷಯ ತಿಳಿಸಿದ್ದು, ಅವರು ಕರೆದುಕೊಂಡು ಹೋಗಿದ್ದಾರೆ.
ಮತ್ತೆ ಪುಸಲಾಯಿಸಿ ಪತ್ನಿಯನ್ನು ಕರೆದುಕೊಂಡು ಬಂದಿದ್ದ ಅನಿಲ್ ಶನಿವಾರ ರಾತ್ರಿ ಪತ್ನಿ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮನೆಯವರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ.
ಮನೆಯಲ್ಲಿ ಶವ ಮಲಗಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ನೇಣು ಬಿಗಿದಿರಲಿಲ್ಲ, ಪತಿಯೇ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಕೊಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಸ್ಪಿ ಶ್ರೀರಾಮ ಎಲ್ ಅರೆಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.