ಬೆಂಗಳೂರು: ಪತಿಯ ಜನನಾಂಗಕ್ಕೆ ಗುಪ್ತ ರೋಗವಿದೆ. ಲೈಂಗಿಕ ಸಂಪರ್ಕ ಹೊಂದಲು ನಿರಾಸಕ್ತಿ ತೋರಿಸುತ್ತಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಮಾನಸಿಕ ಆಘಾತ ಉಂಟು ಮಾಡಿದ್ದಾರೆ ಎಂದು ಗಂಡನ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಕ್ರಿಮಿನಲ್ ದೂರನ್ನು ಹೈಕೋರ್ಟ್ ವಜಾಗೊಳಿಸಿದೆ.
ಸುಳ್ಳು ಮಾಹಿತಿ ನೀಡಿದ ಪತ್ನಿಯ ವಿರುದ್ಧ ನ್ಯಾಯ ಪಡೆಯಲು ಪತಿ ಅರ್ಹರಿದ್ದಾರೆ. ಅವರು ಬಯಸಿದಲ್ಲಿ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ನ್ಯಾಯಪೀಠ ತಿಳಿಸಿದೆ. ಅಮೆರಿಕದ ಪ್ರಸಿದ್ಧ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವತ್ತಿರುವ 35 ವರ್ಷದ ಪತಿ ತನ್ನ ವಿರುದ್ಧ ಪತ್ನಿ ದಾಖಲಿಸಿದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದಲ್ಲಿ ನಡೆದಿದೆ. ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧ ವಿಚಾರಣಾ ಕೋರ್ಟ್ ನಲ್ಲಿರುವ ಪ್ರಕರಣವನ್ನು ರದ್ದುಪಡಿಸಿ ಆದೇಶ ನೀಡಿದೆ.
32 ವರ್ಷದ ಮಹಿಳೆ ಪತಿಯ ವಿರುದ್ಧ ಆರೋಪ ಮಾಡಿ ದಾಖಲಿಸಿದ್ದ ದೂರನ್ನು ಹೈಕೋರ್ಟ್ ವಜಾಗೊಳಿಸಿದೆ ಕ್ಷುಲ್ಲಕ, ಕೌಟುಂಬಿಕ ಕಾರಣಗಳಿಗೆ ರೋಗದ ನೆಪ ಹೇಳಿ ದೂರು ದಾಖಲಿಸುವ ಮೂಲಕ ಅರ್ಜಿದಾರರ ಪತ್ನಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಕಾನೂನಿನ ದುರ್ಬಳಕೆ ಮಾಡಿಕೊಂಡು ಪತಿಯನ್ನು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ. ಇದರಲ್ಲಿ ಪತಿಯ ದೋಷ ಕೌಟುಂಬಿಕ ಕ್ರೌರ್ಯ ಆರೋಪಗಳು ನಿರಾಧಾರ ಎಂದು ಸ್ಪಷ್ಟವಾಗಿದೆ. ಸುಳ್ಳು ಮಾಹಿತಿ ನೀಡಿದ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 211ರ ಅಡಿಯಲ್ಲಿ ಕ್ರಿಮಿನಲ್ ದೂರು ದಾಖಲಿಸಿ ತಮಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆಯಲು ಪತಿ ಅರ್ಹರಿದ್ದಾರೆ ಎಂದು ನ್ಯಾಯಪೀಠ ಆದೇಶ ನೀಡಿದೆ.