ಗಂಡನ ಮೇಲೆ ಸಾರ್ವಜನಿಕವಾಗಿ ಸುಳ್ಳು ಆರೋಪಗಳನ್ನು ಮಾಡಿ ಅವಮಾನಿಸುವುದು, ಕಚೇರಿಯಲ್ಲೇ ಅವನನ್ನು ವುಮನೈಸರ್ ಎಂದು ಹಣೆಪಟ್ಟಿ ಕಟ್ಟುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದಂಪತಿಗೆ ನೀಡಲಾದ ವಿಚ್ಛೇದನವನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಹೈಕೋರ್ಟ್ ಈ ತೀರ್ಪು ನೀಡಿತು. ಪ್ರಕರಣದಲ್ಲಿ ಪತ್ನಿಯ ಕೆಲಸಗಳು ಕ್ರೌರ್ಯದ ಕೃತ್ಯಗಳಿಗೆ ಆಧಾರವಾಗಿದ್ದವು.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರನ್ನೊಳಗೊಂಡ ವಿಭಾಗೀಯ ಪೀಠವು ನಂಬಿಕೆ, ಗೌರವವು ಮದುವೆಯ ಅಡಿಪಾಯದ ಆಧಾರ ಸ್ತಂಭಗಳಾಗಿವೆ ಎಂದು ಒತ್ತಿಹೇಳಿದೆ.
ಯಾವುದೇ ವ್ಯಕ್ತಿ ತಮ್ಮ ಸಂಗಾತಿಯಿಂದ ಅಗೌರವದ ನಡವಳಿಕೆಯನ್ನು ಸಹಿಸಬಾರದು ಎಂದು ಪೀಠವು ಸೂಚಿಸಿದೆ. ಒಬ್ಬ ಸಂಗಾತಿಯ ಅಜಾಗರೂಕ, ಮಾನಹಾನಿಕರ, ಅವಮಾನಕರ ಮತ್ತು ಆಧಾರರಹಿತ ಆರೋಪಗಳು ಇನ್ನೊಬ್ಬರ ವರ್ಚಸ್ಸಿಗೆ ಕಳಂಕ ತರುತ್ತವೆ ಮತ್ತು ಅಂತಹ ನಡವಳಿಕೆಗಳು ತೀವ್ರ ಕ್ರೌರ್ಯದ ಕೃತ್ಯಗಳಿಗೆ ಕಾರಣವಾಗುತ್ತವೆಂದು ನ್ಯಾಯಾಲಯವು ಗಮನಿಸಿದೆ.
ದುರದೃಷ್ಟವಶಾತ್ ಗಂಡನ ಕಚೇರಿಯ ಸಿಬ್ಬಂದಿಗಳ ಸಮ್ಮುಖದಲ್ಲಿ, ಆತನ ಕಚೇರಿ ಸಭೆಗಳಲ್ಲಿ ದಾಂಪತ್ಯ ದ್ರೋಹದ ಆರೋಪಗಳನ್ನು ಮಾಡುವ ಮಟ್ಟಕ್ಕೆ ಹೋದ ಪತ್ನಿಯಿಂದ ಪತಿಯೇ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿ ಕಿರುಕುಳ ಮತ್ತು ಮಾತಿನ ದಾಳಿಗೊಳಗಾಗಿರುವ ಪ್ರಕರಣ ನಮ್ಮ ಮುಂದಿದೆ ಎಂದು ಪೀಠವು ಉಲ್ಲೇಖಿಸಿದೆ.
ಪತ್ನಿಯು ಗಂಡನ ಕಚೇರಿಯಲ್ಲಿನ ಮಹಿಳಾ ಸಿಬ್ಬಂದಿಯನ್ನೂ ನಿಂದಿಸಿದ್ದು, ಎಲ್ಲರೆದುರು ತನ್ನ ಗಂಡನನ್ನು ವುಮನೈಸರ್ ಎಂದು ನಿಂದಿಸಿರುವುದು ತೀವ್ರತರ ಕ್ರೌರ್ಯವಾಗಿದೆ ಎಂದು ಕೋರ್ಟ್ ಹೇಳಿದೆ.
ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಪ್ರಕರಣದಲ್ಲಿನ ದಂಪತಿ ಮದುವೆಯಾಗಿ 6 ವರ್ಷ ಕಾಲ ಜೊತೆಯಲ್ಲಿದ್ದರು.
“ಯಾವುದೇ ಯಶಸ್ವಿ ದಾಂಪತ್ಯವು ಪರಸ್ಪರ ಗೌರವ ಮತ್ತು ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಯಾವುದಾದರೂ ಒಂದು ಮಟ್ಟವನ್ನು ಮೀರಿ ರಾಜಿ ಮಾಡಿಕೊಂಡರೆ, ಯಾವುದೇ ಸಂಬಂಧವು ಅರ್ಧ-ಸತ್ಯ, ಅರ್ಧ-ಸುಳ್ಳು, ಅರ್ಧ-ಗೌರವ ಮತ್ತು ಅರ್ಧ-ನಂಬಿಕೆಯ ಮೇಲೆ ನಿಲ್ಲುವುದಿಲ್ಲವಾದ್ದರಿಂದ ಸಂಬಂಧದ ಅಂತ್ಯವು ಅನಿವಾರ್ಯವಾಗಿದೆ.” ಎಂದು ನ್ಯಾಯಾಲಯ ಗಮನಿಸಿದೆ. ಜೊತೆಗೆ ಪ್ರಕರಣದಲ್ಲಿ ಪತ್ನಿಯು ತನ್ನ ಮಗುವನ್ನು ಗಂಡನಿಂದ ದೂರವಿಟ್ಟಿದ್ದರು. ಇದನ್ನು ಗಮನಿಸಿದ ಕೋರ್ಟ್, “ಪ್ರಸ್ತುತ ಪ್ರಕರಣದಲ್ಲಿ, ಮಗುವನ್ನು ತಂದೆಯಿಂದ ಸಂಪೂರ್ಣವಾಗಿ ದೂರವಿಟ್ಟಿರುವುದು ಮಾತ್ರವಲ್ಲದೆ ತಂದೆಯ ವಿರುದ್ಧ ಅಸ್ತ್ರವಾಗಿಯೂ ಬಳಸಲಾಗಿದೆ. ಮಗು ದೂರ ಸರಿಯುವುದನ್ನು ಮತ್ತು ಸಂಪೂರ್ಣವಾಗಿ ತಂದೆಯ ವಿರುದ್ಧವಾಗಿರುವುದನ್ನು ನೋಡುವುದು ಪೋಷಕರಿಗೆ ಹೆಚ್ಚು ನೋವು ಕೊಡುತ್ತದೆ. ಮಗುವಿಗೆ ಅಗತ್ಯವಿರುವುದನ್ನ ಒದಗಿಸುವಲ್ಲಿ ತಂದೆ ಎಂದಿಗೂ ವಿಫಲವಾಗದ ಹಿನ್ನೆಲೆಯಲ್ಲಿ ಇದು ಸ್ವಲ್ಪ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ”ಎಂದು ನ್ಯಾಯಾಲಯವು ಉಲ್ಲೇಖಿಸಿದೆ.