
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಚಾವಡಿಯಲ್ಲಿ ಹೃದಯಘಾತದಿಂದ ಪತ್ನಿ ನಿಧನರಾಗಿದ್ದು, ಸಾವಿನ ಸುದ್ದಿ ತಿಳಿದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮಚಾವಡಿಯ ಸೇಸಪ್ಪ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ಮೀನಾಕ್ಷಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದ ಮೀನಾಕ್ಷಿ ಅವರಿಗೆ ಎರಡು ದಿನದ ಹಿಂದೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಸಾವಿನ ಸುದ್ದಿ ತಿಳಿದು ನೊಂದುಕೊಂಡಿದ್ದ ಸೇಸಪ್ಪ ಪೂಜಾರಿ ಮನೆಗೆ ಬಂದು ವಿಷ ಸೇವಿಸಿದ್ದಾರೆ.
ಇದನ್ನು ತಿಳಿದ ನೆರೆಹೊರೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗುರುವಾರ ಪತಿ-ಪತ್ನಿಯ ಮೃತ ದೇಹಗಳನ್ನು ಮನೆಗೆ ತಂದು ಅಂತಿಮ ವಿಧಿ ವಿಧಾನದ ನಂತರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕೊಣಾಜೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.