ಪತಿ ಅಕ್ರಮ ಸಂಬಂಧ ಹೊಂದಿದ್ದ ಮೂವರನ್ನ ಪತ್ತೆ ಮಾಡಿದ ಪತ್ನಿ ಎಲ್ಲರನ್ನೂ ಒಂದೆಡೆ ಸೇರಿಸಿ ಗಂಡನ ಅಸಲಿ ಮುಖವಾಡವನ್ನ ಬಯಲು ಮಾಡಿದ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಈತ ತನ್ನ ಪತ್ನಿಯ ಬಳಿ ತಾನು ಅಕ್ರಮ ಸಂಬಂಧ ಹೊಂದಿದ್ದ ಮೂವರೂ ಮಹಿಳೆಯರನ್ನ ಸಹೋದರಿಯರು ಎಂದು ಪರಿಚಯ ಮಾಡಿಸಿದ್ದ ಎನ್ನಲಾಗಿದೆ. ಮೂವರೂ ಮಹಿಳೆಯರಿಗೂ ಈತ ಮದುವೆಯಾಗಿ ಒಂದು ಮಗುವನ್ನ ಹೊಂದಿದ್ದಾನೆ ಎಂಬ ವಿಚಾರ ತಿಳಿದೇ ಇರಲಿಲ್ಲವಂತೆ..!
ಸಹಾಯವಾಣಿಗೆ ಕರೆ ಮಾಡಿದ್ದ ಮಹಿಳೆಯೊಬ್ಬರು ತನ್ನ ಮೇಲೆ ಪತಿ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಳು. ಮನೆಯಿಂದ ಏಕೆ ಹೊರಗಡೆ ಇರುತ್ತೀರಾ ಎಂದು ಕೇಳಿದಾಗೆಲ್ಲ ಈಕೆಯ ಪತಿ ಹಲ್ಲೆ ನಡೆಸುತ್ತಿದ್ದನಂತೆ. ಇವರಿಬ್ಬರು 10 ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 8 ವರ್ಷದ ಮಗ ಕೂಡ ಇದ್ದಾನೆ. ಪತಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆ ಹೊಂದಿದ್ದ ಪತ್ನಿ ಗಂಡನ ವಿರುದ್ಧ ಸಾಕ್ಷ್ಯ ಕಲೆ ಹಾಕಲು ಆರಂಭಿಸಿದ್ದಾಳೆ. ಪತಿಯ ಮೊಬೈಲ್ನಲ್ಲಿದ್ದ ಸಂದೇಶವು ಪತ್ನಿಯ ಶಂಕೆಗೆ ಇನ್ನಷ್ಟು ಪುಷ್ಟಿ ನೀಡಿದ್ದವು.
ಈ ಬಗ್ಗೆ ಗಂಡನ ಪೋಷಕರು ಯಾವುದೇ ಸಹಾಯ ನೀಡದ ಹಿನ್ನೆಲೆಯಲ್ಲಿ ತಾನೇ ಈ ಸಮಸ್ಯೆಯನ್ನ ಬಗೆಹರಿಸಬೇಕೆಂದು ಪತ್ನಿ ನಿರ್ಧರಿಸಿದ್ದಾಳೆ. ಮೂವರು ಮಹಿಳೆಯರನ್ನ ಸಂಪರ್ಕಿಸುವಲ್ಲಿ ಯಶಸ್ವಿಯಾದ ಪತ್ನಿ ಅವರ ಬಳಿ ಪತಿಯ ಬಗ್ಗೆ ತಿಳಿದುಕೊಂಡಿದ್ದಾಳೆ. ಈ ಪುಣ್ಯಾತ್ಮ ಮೂವರಿಂದಲೂ ತನಗೆ ವಿವಾಹದ ವಿಚಾರವನ್ನ ಮುಚ್ಚಿಟ್ಟು ಪ್ರೇಮ ಸಲ್ಲಾಪ ನಡೆಸುತ್ತಿದ್ದ ಎನ್ನಲಾಗಿದೆ. ಈ ಮೂವರನ್ನೂ ಒಂದೆಡೆ ಸೇರಿಸಿ ತನ್ನ ಪತಿಯನ್ನೂ ಅದೇ ಸ್ಥಳಕ್ಕೆ ಕರೆಯಿಸಿ ಪತಿಯ ಅಸಲಿ ಮುಖವಾಡವನ್ನ ಬಟಾಬಯಲು ಮಾಡಿದ್ದಾರೆ. ಪತಿಯು ತಪ್ಪೊಪ್ಪಿಕೊಂಡಿದ್ದು ಈ ಅಕ್ರಮ ಸಂಬಂಧಗಳನ್ನ ಕೊನೆ ಮಾಡೋದಾಗಿ ಹೇಳಿದ್ದಾನೆ ಎನ್ನಲಾಗಿದೆ.