ಪತಿಯ ಒಳಿತು ಹಾಗೂ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸಿ ಕರ್ವಾ ಚೌತ್ ದಿನದಂದು ಪತ್ನಿ ಉಪವಾಸ ವ್ರತ ಆಚರಿಸುತ್ತಾಳೆ. ಅಷ್ಟೇ ಅಲ್ಲ, ಅಂದು ಚಂದ್ರ ದರ್ಶನವಾದ ಬಳಿಕ ಪತಿಯ ಮುಖ ನೋಡಿ ಬಳಿಕ ಆಹಾರ ಸೇವಿಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಕರ್ವಾ ಚೌತ್ ದಿನದಂದೇ ಪತಿಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ.
ಹೌದು, ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಪತಿಯೊಂದಿಗೆ ಮುನಿಸಿಕೊಂಡಿದ್ದ ಪತ್ನಿ ತವರು ಸೇರಿಕೊಂಡಿದ್ದಳು. ಆದರೂ ಕೂಡ ಕರ್ವಾ ಚೌತ್ ಆಚರಿಸುತ್ತಿದ್ದು, ತನ್ನ ಸ್ನೇಹಿತೆಯರೊಂದಿಗೆ ಕೆಲ ಸಾಮಾಗ್ರಿಗಳ ಖರೀದಿಗೆಂದು ಮಾರುಕಟ್ಟೆಗೆ ಹೋಗಿದ್ದಾಳೆ.
ಇದೇ ಸಂದರ್ಭದಲ್ಲಿ ಆಕೆಯ ಪತಿ ತನ್ನ ಗರ್ಲ್ ಫ್ರೆಂಡ್ ಜೊತೆ ಶಾಪಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿರುವುದು ಇವರುಗಳ ಕಣ್ಣಿಗೆ ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಆತನ ಪತ್ನಿ ತನ್ನ ಸ್ನೇಹಿತೆಯರೊಂದಿಗೆ ಸೇರಿಕೊಂಡು ಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಬಿಡಿಸಿಕೊಳ್ಳಲು ಬಂದ ಅವನ ಗೆಳತಿಗೂ ಕೂಡ ಒದೆ ಬಿದ್ದಿದೆ.
ತನ್ನ ಅಂಗಡಿಯಲ್ಲಿ ನಡೆದ ಈ ಗಲಾಟೆಯಿಂದ ಕಂಗಾಲಾಗಿ ಹೋದ ಅಂಗಡಿ ಮಾಲೀಕ, ದಯವಿಟ್ಟು ಹೊರಗೆ ಹೋಗಿ ಜಗಳವಾಡಿ ಎಂದು ಬೇಡಿಕೊಂಡರೂ ಸಹ ಮಹಿಳಾ ಮಣಿಗಳು ಜಗ್ಗಿಲ್ಲ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.