ಕೊಪ್ಪಳ: ಮದುವೆಯಾಗುವುದಾಗಿ ನಂಬಿಸಿ ವಿಧವೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಪೊಲೀಸ್ ಕೈಕೊಟ್ಟಿದ್ದು, ನೊಂದ ಮಹಿಳೆ ನ್ಯಾಯಕ್ಕಾಗಿ ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ.
ಕೊಪ್ಪಳ ಜಿಲ್ಲೆ ಮುನಿರಾಬಾದ್ ಐ.ಆರ್.ಬಿ. ಪೊಲೀಸ್ ಆಗಿರುವ ಯಮನೂರಪ್ಪ ವಿರುದ್ಧ ಆರೋಪ ಕೇಳಿ ಬಂದಿದೆ. ಈಗಾಗಲೇ ಎರಡು ಮದುವೆಯಾಗಿದ್ದ ಮಹಿಳೆಯ ಮೊದಲ ಪತಿ ತೀರಿಕೊಂಡಿದ್ದು, ಎರಡನೇ ಪತಿ ವಿಚ್ಛೇದನ ನೀಡಿದ್ದಾರೆ. ಮಗುವಿನೊಂದಿಗೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಮಹಿಳೆ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಆಕೆಗೆ ಬಾಳು ಕೊಡುವುದಾಗಿ ಪೊಲೀಸ್ ಕಾನ್ಸ್ಟೇಬಲ್ ಯಮನೂರಪ್ಪ ನಂಬಿಸಿದ್ದಾನೆ.
ಮದುವೆಯಾಗುವುದಾಗಿ ನಂಬಿಸಿದ್ದ ಯಮನೂರಪ್ಪ ಐದು ವರ್ಷ ಹಿಟ್ನಾಳ್ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿ ಆಕೆಯೊಂದಿಗೆ ಸಂಸಾರ ನಡೆಸಿದ್ದಾನೆ. ಮೂರು ಬಾರಿ ಗರ್ಭಿಣಿಯಾಗಿದ್ದ ಮಹಿಳೆಗೆ ಸುಳ್ಳು ಹೇಳಿ ಗರ್ಭಪಾತ ಮಾಡಿಸಿದ್ದ ಎಂದು ಆರೋಪಿಸಲಾಗಿದೆ. ಈಗ ಮಹಿಳೆ ಮತ್ತೆ ಗರ್ಭಿಣಿಯಾಗಿದ್ದು, ಮದುವೆಗೆ ಒಪ್ಪದೆ ಪರಾರಿಯಾಗಿದ್ದಾನೆ. ನೊಂದ ಮಹಿಳೆ ಎಸ್.ಪಿ. ಕಚೇರಿಗೆ ದೂರು ನೀಡಿದ್ದಾರೆ.