ಕಾರಿನಲ್ಲಿ ಪ್ರಯಾಣಿಸುವುದು ಎಂದರೆ ಬಹುತೇಕರು ಬಹಳ ಇಷ್ಟಪಡುತ್ತಾರೆ. ಅದರಲ್ಲೂ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವವರು ಕಾಲುಗಳನ್ನು ಚಾಚಿ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿಟ್ಟು ವಿಶ್ರಾಂತಿ ಪಡೆಯುತ್ತಾರೆ. ಆದರೆ, ಈ ರೀತಿ ಮಾಡುವುದು ಅಪಾಯಕಾರಿ. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ನಿಮ್ಮ ಕಾಲುಗಳನ್ನು ಏಕೆ ಇಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಹೌದು, ಇದೀಗ ಟ್ವಿಟರ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಪಘಾತದ ಸಮಯದಲ್ಲಿ ಡ್ಯಾಶ್‌ಬೋರ್ಡ್‌ನಲ್ಲಿ ಕಾಲುಗಳನ್ನು ಚಾಚಿ ಕುಳಿತುಕೊಂಡರೆ ಉಂಟಾಗುವ ಪರಿಣಾಮಗಳನ್ನು ತೋರಿಸುತ್ತದೆ. ಕಾರಿನಲ್ಲಿ ಪ್ರಯಾಣಿಸುವಾಗ ಸರಿಯಾದ ಭಂಗಿಯ ಪ್ರಾಮುಖ್ಯತೆಯನ್ನು ಪ್ರದರ್ಶಿಸುವ ವಿಡಿಯೋ ಕಣ್ಣು ತೆರೆಸುವಂತಿದೆ. ಡ್ಯಾಶ್‌ಬೋರ್ಡ್ ಮೇಲೆ ಕಾಲುಗಳನ್ನು ಹೊಂದಿರುವ ಡಮ್ಮಿಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಕಾರು ಅಪಘಾತವುಂಟಾದಾಗ ಪರಿಣಾಮವು ತೀವ್ರವಾಗಿರುತ್ತದೆ. ಏರ್‌ಬ್ಯಾಗ್ ತೆರೆದಾಗ ಡಮ್ಮಿ ವ್ಯಕ್ತಿಯ ಕಾಲುಗಳನ್ನು ಅದರ ತಲೆಯ ಕಡೆಗೆ ಹಿಂದಕ್ಕೆ ತಳ್ಳಲಾಗುತ್ತದೆ. ಹೀಗಾಗಿ ಅದು ಹಿಂದಕ್ಕೆ ಬಾಗುತ್ತದೆ. ಇದು ಕಾರಿನಲ್ಲಿ ಪ್ರಯಾಣಿಸುವಾಗ ಡ್ಯಾಶ್‌ಬೋರ್ಡ್‌ನಲ್ಲಿ ಕಾಲುಗಳನ್ನು ಚಾಚಿಕೊಂಡು ಕುಳಿತುಕೊಳ್ಳುವುದರಿಂದ ಉಂಟಾಗುವ ಹಾನಿಯ ಸ್ಪಷ್ಟ ಸೂಚನೆಯಾಗಿದೆ.
ಕಾರಿನಲ್ಲಿ ಪ್ರಯಾಣಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅತ್ಯಗತ್ಯ. ಉದಾಹರಣೆಗೆ ವಾಹನದ ಕ್ರಿಯಾತ್ಮಕತೆಯನ್ನು ಖಚಿತಪಡಿಸಿಕೊಳ್ಳುವುದು. ಓವರ್‌ಲೋಡ್ ಮತ್ತು ಇತರ ಸಣ್ಣ ವಿವರಗಳನ್ನು ಪರಿಶೀಲಿಸುವುದು ಮತ್ತು ಮುಖ್ಯವಾಗಿ ಸರಿಯಾದ ಭಂಗಿಯೊಂದಿಗೆ ಕುಳಿತುಕೊಳ್ಳುವುದು. ಈ ವಿಡಿಯೋವು ಅಪಘಾತದ ಸಮಯದಲ್ಲಿ ಮಾರಣಾಂತಿಕವಾಗಬಹುದು ಎಂಬುದನ್ನು ನೆನಪಿಸುತ್ತದೆ.
ಕಾರಿನಲ್ಲಿ ಪ್ರಯಾಣಿಸುವಾಗ ಸರಿಯಾದ ಭಂಗಿಯೊಂದಿಗೆ ಕುಳಿತುಕೊಳ್ಳುವ ಮಹತ್ವದ ಕುರಿತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಮೂಲಕ ವೀಡಿಯೊ ವೈರಲ್ ಆಗಿದೆ. ಕಾರಿನಲ್ಲಿ ಕುಳಿತುಕೊಳ್ಳುವ ಭಂಗಿಯನ್ನು ಗಂಭೀರವಾಗಿ ಪರಿಗಣಿಸದವರು ಇದನ್ನು ಒಮ್ಮೆ ಸರಿಯಾಗಿ ನೋಡಿ. ಇನ್ಮುಂದೆ ನೀವು ಈ ರೀತಿ ಕುಳಿತುಕೊಳ್ಳುವುದಿಲ್ಲ. ಅಲ್ಲದೆ ಅತಿಯಾದ ವೇಗದ ಚಾಲನೆ ಕೂಡ ಅಪಾಯಕಾರಿ ಎಂಬುದನ್ನು ತೋರಿಸುವ ವಿಡಿಯೋ ಕೂಡ ವೈರಲ್ ಆಗಿದೆ.