ಇತ್ತೀಚಿನ ದಿನಗಳಲ್ಲಿ ಗೂಗಲ್ ನಮ್ಮ ಅವಿಭಾಜ್ಯ ಅಂಗವಾಗಿದೆ. ಯಾವುದೇ ಕೆಲಸವಿರಲಿ,ಯಾವುದೇ ಸ್ಥಳವಿರಲಿ,ಯಾವುದೇ ಸಮಸ್ಯೆಯಿರಲಿ ಮೊದಲು ಗೂಗಲ್ ಸರ್ಚ್ ಮಾಡುವುದು ಸಾಮಾನ್ಯ ಅಭ್ಯಾಸವಾಗಿದೆ. ಇಂಟರ್ನೆಟ್ ನಲ್ಲಿ ಸಣ್ಣ ವಿಷ್ಯದಿಂದ ದೊಡ್ಡ ಸಮಸ್ಯೆಯವರೆಗೆ ಎಲ್ಲವೂ ಸಿಗುತ್ತದೆ. ಕೈಗೆ ಸಣ್ಣ ಗಾಯವಾದ್ರೂ, ತಲೆ ನೋವು ಬಂದ್ರೂ, ದೊಡ್ಡ ಖಾಯಿಲೆ ಬಂದ್ರೂ ಜನರು ಮೊದಲು ಗೂಗಲ್ ಸರ್ಚ್ ಮಾಡ್ತಾರೆ.
ಗೂಗಲ್ ನಲ್ಲಿ ಎಲ್ಲ ಖಾಯಿಲೆಯ ಲಕ್ಷಣ, ಕಾರಣ ಹಾಗೂ ಪರಿಹಾರವಿರುತ್ತದೆ. ಆದ್ರೆ ಗೂಗಲ್ ಸರ್ಚ್ ನಲ್ಲಿ ಖಾಯಿಲೆ ಬಗ್ಗೆ ಮಾಹಿತಿ ಪಡೆಯುವುದು ಹೆಚ್ಚು ಅಪಾಯಕಾರಿ ಎಂಬುದು ನಿಮಗೆ ಗೊತ್ತಾ ? ಅದು ನಿಮ್ಮನ್ನು ಮತ್ತಷ್ಟು ಅನಾರೋಗ್ಯರನ್ನಾಗಿ ಮಾಡುತ್ತದೆ.
ಕೊರೊನಾದ ಬಗ್ಗೆಯೂ ಇಂಟರ್ನೆಟ್ ನಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಜನರು ವೈದ್ಯರ ಬಳಿ ಹೋಗುವ ಬದಲು ಇಂಟರ್ನೆಟ್ ನಲ್ಲಿ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಇಂಟರ್ನೆಟ್ ನಲ್ಲಿರುವ ಎಲ್ಲ ಮಾಹಿತಿ ಸತ್ಯವಾಗಿರುವುದಿಲ್ಲ. ಕೆಲವೊಂದು ತಪ್ಪು ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಒಂದು ವೇಳೆ ತಪ್ಪು ವಿಧಾನವನ್ನು ನಾವು ಅನುಸರಿಸಿದ್ರೆ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳ್ತಾರೆ.
ತಲೆನೋವಿನ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದೀರೆಂದುಕೊಳ್ಳೋಣ. ಅದ್ರಲ್ಲಿ ಬರೀ ತಲೆ ನೋವಿನ ವಿಷ್ಯವಿರುವುದಿಲ್ಲ, ಬ್ರೇನ್ ಟ್ಯೂಮರ್ ವರೆಗಿನ ಮಾಹಿತಿಯಿರುತ್ತದೆ. ಇದು ನಿಮ್ಮನ್ನು ಮತ್ತಷ್ಟು ಗೊಂದಲಕ್ಕೀಡು ಮಾಡುತ್ತದೆ. ಭಯ ಶುರುವಾಗುತ್ತದೆ. ಇದ್ರಿಂದ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಸಾಮಾನ್ಯವಾಗಿದ್ದ ನಿಮ್ಮ ತಲೆನೋವು ಬೇರೆ ರೂಪ ಪಡೆಯುತ್ತದೆ. ಇದನ್ನು ಸೈಬರ್ ಕಾಂಡ್ರಿಯಾ ಎಂದು ಕರೆಯಲಾಗುತ್ತದೆ.
ಸೈಬರ್ ಕಾಂಡ್ರಿಯಾದಲ್ಲಿ ರೋಗಿ, ಹೆಚ್ಚು ಚಿಂತಿಸಲು ಶುರು ಮಾಡುತ್ತಾನೆ. ಸಾಮಾನ್ಯ ಕಫ, ಶೀತದ ಬಗ್ಗೆಯೂ ಹೆಚ್ಚು ಚಿಂತಿಸಿ ಮತ್ತಷ್ಟು ಅನಾರೋಗ್ಯಕ್ಕೆ ಗುರಿಯಾಗುತ್ತಾನೆ. ಅಲ್ಲದೆ ಅವಶ್ಯಕತೆಯಿಲ್ಲದ ತಪಾಸಣೆ ಮಾಡಿಸಲು ಶುರುಮಾಡ್ತಾನೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆ ನೋವು ಬಂದಿದ್ದರೂ, ವೈದ್ಯರ ಬಳಿ ಬಂದು ಇಸಿಜಿ ಮಾಡಿಸುವವರ ಸಂಖ್ಯೆ ಹೆಚ್ಚಿದೆ ಎಂದು ವೈದ್ಯರು ಹೇಳ್ತಾರೆ. ಇದು ಕೇವಲ ಇಂಟರ್ನೆಟ್ ನಿಂದ ಮಾತ್ರವಲ್ಲ, ಸುತ್ತಮುತ್ತಲ ಜನರ ಮಾತಿನಿಂದಲೂ ಭಯ ಶುರುವಾಗುತ್ತದೆ.
ಸೈಬರ್ ಕಾಂಡ್ರಿಯಾಕ್ಕೆ ಒಳಗಾಗುವ ಮೊದಲು, ಇಂಟರ್ನೆಟ್ ನಲ್ಲಿರುವ ವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಡಬೇಕು. ಲಕ್ಷಣಗಳನ್ನು ನೋಡಿದರೂ ಓದಿ ಅಲ್ಲಿಯೇ ಬಿಡಬೇಕು. ಸಮಸ್ಯೆ ನಿಜವಾಗಲೂ ಇದ್ದಲ್ಲಿ ವೈದ್ಯರನ್ನು ಭೇಟಿಯಾಗಬೇಕು. ಹಾಗೆ ವೈದ್ಯರು ನೀಡಿದ ಸಲಹೆಯನ್ನು ಸರಿಯಾಗಿ ಪಾಲಿಸಿ, ಅವರ ಮೇಲೆ ವಿಶ್ವಾಸವಿಡಬೇಕು.