ನಾವೆಲ್ಲಾ ಬಹಳಷ್ಟು ಹಾರರ್ ಚಿತ್ರಗಳನ್ನು ವೀಕ್ಷಿಸಿದ್ದೇವೆ. ಇಂಥ ಚಿತ್ರಗಳನ್ನೇ ನೆನಪಿಸುವಂಥ ಅನೇಕ ಅಜ್ಞಾತ ಸ್ಥಳಗಳು ನಮ್ಮ ದೇಶದಲ್ಲಿವೆ ಎಂದು ನೀವೆಲ್ಲಾ ಸಾಕಷ್ಟು ಬಾರಿ ಓದಿರಬಹುದು. ಈ ಸ್ಥಳಗಳ ಪಟ್ಟಿಯಲ್ಲಿ ರೈಲ್ವೇ ನಿಲ್ದಾಣವೂ ಇದೆ ಎಂದರೆ ಹೇಗೆ ?
ಅಸಹಜ ಘಟನೆಗಳು ಜರುಗುತ್ತಲೇ ಇದ್ದ ಪರಿಣಾಮ ಪಶ್ಚಿಮ ಬಂಗಾಳದ ರೈಲ್ವೇ ನಿಲ್ದಾಣವೊಂದು ಕಳೆದ 42 ವರ್ಷಗಳಿಂದಲೂ ಮುಚ್ಚಿರುವ ವಿಚಾರವೊಂದು ಇತ್ತೀಚೆಗೆ ಭಾರೀ ಸುದ್ದಿಯಾಗಿದೆ.
ಜಾರ್ಖಂಡ್‌ನ ರಾಂಚಿ ವಿಭಾಗದ ಕೋಟ್ಶಿಲಾ-ಮುರಿ ವಲಯದಲ್ಲಿ ಬರುವ ಈ ನಿಲ್ದಾಣ ಪಶ್ಚಿಮ ಬಂಗಾಲದ ಪುರುಲಿಯಾ ಜಿಲ್ಲೆಯಲ್ಲಿದೆ. ಈ ರೈಲ್ವೇ ನಿಲ್ದಾಣದ ಹೆಸರು ಕೇಳಿದರೆ ಸಾಕು ಇಲ್ಲಿನ ಜನರಿಗೆ ಒಂದು ರೀತಿಯ ಭೀತಿ ಆವರಿಸುತ್ತದೆ. ಇದೇ ಭಯದಿಂದಾಗಿ ಯಾರೂ ಸಹ ಈ ನಿಲ್ದಾಣದಲ್ಲಿ ಕೆಲಸ ಮಾಡಲು ಸಿದ್ಧವಿಲ್ಲದ ಕಾರಣ ಈ ನಿಲ್ದಾಣವನ್ನು 42 ವರ್ಷಗಳ ಕಾಲ ಮುಚ್ಚಲಾಗಿದೆ.
ಇವತ್ತಿಗೂ ಸಹ ಈ ನಿಲ್ದಾಣ ಹಾದು ಹೋಗುವ ಸಂದರ್ಭದಲ್ಲಿ ರೈಲುಗಳಲ್ಲೂ ಸಹ ಮೌನ ಆವರಿಸಿರುತ್ತದೆ. ಕೇವಲ ಮಾನವರು ಮಾತ್ರವಲ್ಲದೇ ಪ್ರಾಣಿಗಳು ಸಹ ಇಲ್ಲಿಗೆ ಬರುವುದಿಲ್ಲ.
ಬೇಗುನ್ಕೊಡರ್ ಎಂಬ ಹೆಸರಿನ ಈ ನಿಲ್ದಾಣ ಸಂತಾಲದ ರಾಣಿ ಲಚನ್ ಕುಮಾರಿಯವರ ಪ್ರಯತ್ನಗಳಿಂದ ನಿರ್ಮಿಸಲ್ಪಟ್ಟಿದ್ದು, 1960ರ ದಶಕದಲ್ಲಿ ಎಲ್ಲಾ ನಿಲ್ದಾಣಗಳಂತೆಯೇ ಕೆಲಸ ಮಾಡುತ್ತಿತ್ತು. ಆದರೆ 1967ರ ಸಂದರ್ಭದಲ್ಲಿ ನಿಲ್ದಾಣದ ಹಳಿಗಳ ಮೇಲೆ ದೆವ್ವಗಳನ್ನು ನೋಡಿದ್ದಾಗಿ ಸ್ಟೇಷನ್ ಮಾಸ್ಟರ್ ಹೇಳಿದ ಪರಿಣಾಮ ಅಂದಿನಿಂದ ಈ ನಿಲ್ದಾಣಕ್ಕೆ ಬರಲು ಜನರು ಹೆದರುತ್ತಿದ್ದರು.
ಬಿಳಿ ಸೀರೆಯಲ್ಲಿದ್ದ ಹೆಣ್ಣು ದೆವ್ವವೊಂದು ರಾತ್ರಿ ವೇಳೆ ರೈಲ್ವೇ ಹಳಿಗಳ ಮೇಲೆ ಓಡಾಡುತ್ತಿರುವುದಾಗಿ ತಿಳಿಸಿದ್ದ ಸ್ಟೇಷನ್ ಮಾಸ್ಟರ್‌ರ ಇದೇ ಮಾತುಗಳು ಬಲು ಬೇಗ ಸುದ್ದಿಯಾಗಿ ಹಬ್ಬಿದೆ. ಇದಾದ ಬಳಿಕ ತಾವೂ ಸಹ ಬಿಳಿ ಸೀರೆಯಲ್ಲಿ ಓಡಾಡುವ ವಿಚಿತ್ರ ಆಕೃತಿಯನ್ನು ಕಂಡಿದ್ದಾಗಿ ಅನೇಕರು ಹೇಳಿದ್ದರು. ಭಾರತೀಯ ರೈಲ್ವೇಯಲ್ಲಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ ಶುಭಾಶೀಶ್ ದತ್ತಾ ಅವರು ಕೋರಾದಲ್ಲಿ ಈ ಬಗ್ಗೆ ವಿವರವಾಗಿ ಬರೆದಿದ್ದಾರೆ.
ಇದಾದ 42 ವರ್ಷಗಳ ಬಳಿಕ, 2009ರಲ್ಲಿ, ಅಂದಿನ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿರ ಒತ್ತಾಸೆಯಂತೆ ಬೇಗುಂಕೋಡರ್ ರೈಲ್ವೇ ನಿಲ್ದಾಣವನ್ನು ಮರಳಿ ಆರಂಭಿಸಲಾಗಿದೆ. ಆದರೂ ಸಹ ಈ ನಿಲ್ದಾಣದಲ್ಲಿ ಯಾವುದೇ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ. ಹಾಲ್ಟ್ ನಿಲ್ದಾಣವಾಗಿಯಷ್ಟೇ ಈ ನಿಲ್ದಾಣ ಕೆಲಸ ಮಾಡುತ್ತಿದೆ.