ಪುತ್ರ ಐಎಎಸ್ ಅಧಿಕಾರಿಯಾದ್ರೂ, ವ್ಯಕ್ತಿಯೊಬ್ಬರು ಇನ್ನೂ ಲಸ್ಸಿ ಮಾರಾಟ ಮಾಡುತ್ತಾ ಸ್ವಾಭಿಮಾನದ ಜೀವನ ಮಾಡುತ್ತಿದ್ದಾರೆ. ಸುಮಾರು 35 ವರ್ಷಗಳಿಂದ, ಅಶೋಕ್ ಸ್ವಾಮಿ ಎಂಬುವವರು ಹರಿಯಾಣದ ದಾದ್ರಿಯಲ್ಲಿರುವ ರೋಹ್ಟಕ್ ಚೌಕ್‌ನಲ್ಲಿ ತಮ್ಮ ವಿಶೇಷ ಲಸ್ಸಿ ಮತ್ತು ಮ್ಯಾಂಗೋ ಶೇಕ್ ಅನ್ನು ಮಾರಾಟ ಮಾಡುತ್ತಿದ್ದಾರೆ.
ತಮ್ಮ ಮಗ ಐಎಎಸ್ ಅಧಿಕಾರಿಯಾದ್ರೂ ಅಶೋಕ್ ಸ್ವಾಮಿ ತಮ್ಮ ವ್ಯವಹಾರವನ್ನು ಮುಂದುವರೆಸಿದ್ದಾರೆ. ಮೊದಲಿಗೆ ಅವರು, ರೋಹ್ಟಕ್ ಚೌಕ್‌ನಲ್ಲಿ ತಮ್ಮ ಬೀದಿ ವ್ಯಾಪಾರವನ್ನು ಪ್ರಾರಂಭಿಸಿದರು. ಅದು ಶೀಘ್ರದಲ್ಲೇ ಜನರಲ್ಲಿ ಅಪಾರ ಮನ್ನಣೆಗೆ ಪಾತ್ರವಾಯಿತು. ಇಂದು ಇವರು ಮಾಡುವ ಲಸ್ಸಿ ಕಿರಿಯರಿಗೂ, ಹಿರಿಯರಿಗೂ ಬಹಳ ಪ್ರಿಯವಾಗಿದೆ.
ಅಲ್ಲದೆ, ಅವರು ರೋಹ್ಟಕ್ ಚೌಕ್‌ನ ಹೃದಯಭಾಗದಲ್ಲಿ ಸ್ವಾಮಿ ಸ್ವೀಟ್ಸ್ ಎಂಬ ಅಂಗಡಿಯನ್ನು ಸಹ ನಡೆಸುತ್ತಿದ್ದಾರೆ. ಅಶೋಕ್ ಸ್ವಾಮಿ ಪುತ್ರ ಸೌರಭ್ ಸ್ವಾಮಿ ಪ್ರಸ್ತುತ ರಾಜಸ್ಥಾನದ ಗಂಗಾನಗರದಲ್ಲಿ ಜಿಲ್ಲಾಧಿಕಾರಿ (ಡಿಸಿ) ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತನ್ನ ಯಶಸ್ಸಿನ ನಡುವೆಯೂ ಸಹ, ಸೌರಭ್ ಸ್ವಾಮಿ ತನ್ನ ತಂದೆಯ ವ್ಯವಹಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ರು. ಓದುತ್ತಿರುವ ವೇಳೆ ಅಂಗಡಿಯಲ್ಲಿ ಲಸ್ಸಿ ತಯಾರಿಕೆಯಲ್ಲಿ ಸಹಾಯ ಮಾಡುತ್ತಿದ್ದರು. ಬಹಳ ಬುದ್ಧಿವಂತನಾಗಿದ್ದ ಸೌರಭ್, ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಅಶೋಕ್ ಸ್ವಾಮಿಯವರ ಲಸ್ಸಿಯು ವಿಶೇಷವಾಗಿ ದಕ್ಷಿಣ ಹರಿಯಾಣದಲ್ಲಿ ವ್ಯಾಪಕವಾದ ಮೆಚ್ಚುಗೆಯನ್ನು ಗಳಿಸಿದೆ. ಅಶೋಕ್ ಸ್ವಾಮಿ ಅವರು ಅತ್ಯುತ್ತಮವಾದ ಹಾಲನ್ನು ಆಯ್ಕೆ ಮಾಡುತ್ತಾರೆ. ಮತ್ತೆ ಹಾಲನ್ನು ಚೆನ್ನಾಗಿ ಕುದಿಸುತ್ತಾರೆ. ಹೀಗಾಗಿ ಲಸ್ಸಿ ಕುಡಿಯಲು ತುಂಬಾ ರುಚಿಕರವಾಗಿರುತ್ತದೆ. ಹೀಗಾಗಿ ಸಾವಿರಾರು ಲಸ್ಸಿ ಗ್ಲಾಸ್‌ಗಳು ಮಾರಾಟವಾಗುತ್ತವೆ. ಆ ಪ್ರದೇಶದಲ್ಲಿ ಅಪಾರ ಖ್ಯಾತಿ ಗಳಿಸಿದೆ ಇವರು ಮಾಡುವ ಲಸ್ಸಿ.
ಸ್ವಾಮಿ ಲಸ್ಸಿ ಅಂಗಡಿಗೆ ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಗೌರವಾನ್ವಿತ ವ್ಯಕ್ತಿಗಳು ಭೇಟಿ ನೀಡಿ, ಇವರ ಲಸ್ಸಿಯನ್ನು ಸವಿದಿದ್ದಾರೆ. ಇಂದಿಗೂ, ಈ ಅಂಗಡಿಯು ರಾಜಕೀಯ ನಾಯಕರಿಗೆ ಆದ್ಯತೆಯ ತಾಣವಾಗಿದೆ.