ಹಮೀರ್‌ಪುರ: ಸಂಗೀತ ಕೇಳಿದ್ರೆ ಹಲವರಿಗೆ ಆನಂದ ಸಿಗುತ್ತದೆ. ಇದರಿಂದ ಕೇವಲ ಖುಷಿಯಷ್ಟೇ ಅಲ್ಲ, ಅನೇಕ ಇತರ ಮಾನಸಿಕ ಪ್ರಯೋಜನಗಳೂ ಇವೆ. ಸಂಶೋಧನೆಯ ಪ್ರಕಾರ, ಸಂಗೀತವು ದೇಹದ ನೈಸರ್ಗಿಕ ಭಾವನೆಯನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ಚಿತ್ತವನ್ನು ಚೈತನ್ಯಗೊಳಿಸಲು ಸಹಾಯ ಮಾಡುತ್ತದೆಯಂತೆ.
ಆದರೆ, ಪ್ರತಿ ಬಾರಿಯೂ ಮಾನವರೇ ಯಾಕೆ ಎಲ್ಲಾ ವಿನೋದಗಳನ್ನು ಹೊಂದಿರಬೇಕು? ಪ್ರಾಣಿಗಳು ಏನು ತಪ್ಪು ಮಾಡಿವೆ, ಅವು ಯಾಕೆ ವಂಚಿತರಾಗಬೇಕು? ಅಲ್ವಾ…. ಇದೀಗ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಕನ್ಹಾ ಗೋಶಾಲೆಯಲ್ಲಿ ಹಸುಗಳು ಪ್ರತಿದಿನ ಧ್ವನಿವರ್ಧಕಗಳ ಮುಖಾಂತರ ಭಜನೆಗಳನ್ನು ಕೇಳುತ್ತವೆ.
ವರದಿಯ ಪ್ರಕಾರ, ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಭೂಷಣ ತ್ರಿಪಾಠಿ ಅವರು ಯೋಗಕ್ಷೇಮ ಮತ್ತು ಸಂತೋಷದ ಭಾವನೆಯನ್ನು ಅನುಭವಿಸಲು, ಬೆಳಿಗ್ಗೆ ಮತ್ತು ಸಂಜೆ ಹಸುಗಳಿಗೆ ಶ್ರೀಕೃಷ್ಣನ ಸುಮಧುರ ಸ್ತೋತ್ರಗಳನ್ನು ನುಡಿಸುವಂತೆ ನಗರ ಪಂಚಾಯತ್‌ನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೋಶಾಲೆಗಳಲ್ಲಿ ಸಂಗೀತವನ್ನು ನುಡಿಸಿದರೆ, ಹಸುಗಳು ಸಂಗೀತಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸುತ್ತವೆ ಎಂದು ನಂಬಲಾಗಿದೆ. ಕಳೆದ ವಾರ ಕನ್ಹಾ ಗೋಶಾಲೆಗೆ ಆಗಮಿಸಿದ ಜಿಲ್ಲಾಧಿಕಾರಿ ಮತ್ತು ಎಸ್ಪಿ ಕಮಲೇಶ್ ದೀಕ್ಷಿತ್ ಅವರು ಗೋವಿನ ಪೂಜೆ ನೆರವೇರಿಸಿ, ಚಳಿಗಾಲವಾದ್ದರಿಂದ ಹಸುಗಳನ್ನು ಬೆಚ್ಚಗೆ ಇರಿಸಲು ಕೇಸರಿ ಬಣ್ಣದ ಶಾಲುಗಳನ್ನು ನೀಡಿದ್ದಾರೆ. ಇಬ್ಬರೂ ಅಧಿಕಾರಿಗಳು ಹಸುಗಳಿಗೆ ಬೆಲ್ಲ ಅರ್ಪಿಸಿದ್ದಾರೆ.
ಹಸುಗಳಿಗೂ ಬರಲಿದೆ ಆಂಬ್ಯುಲೆನ್ಸ್ ಸೇವೆ:
ಇಷ್ಟು ಮಾತ್ರವಲ್ಲದೆ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಸುಗಳಿಗೆ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧವಾಗಿದೆ ಎಂದು ರಾಜ್ಯ ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಹೇಳಿದ್ದಾರೆ. ಈಗಾಗಲೇ 515 ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ, ಬಹುಶಃ ದೇಶದಲ್ಲೇ ಇದು ಮೊದಲನೆಯ ಬಾರಿಗೆ ಜಾರಿಯಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಇನ್ನು ಗಂಭೀರವಾಗಿ ಅಸ್ವಸ್ಥಗೊಂಡ ಹಸುಗಳಿಗೆ ತ್ವರಿತ ಚಿಕಿತ್ಸೆಗಾಗಿ 112 ತುರ್ತು ಸೇವೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿದ 15 ರಿಂದ 20 ನಿಮಿಷಗಳ ಅವಧಿಯಲ್ಲಿ ಪಶುವೈದ್ಯರು ಮತ್ತು ಇಬ್ಬರು ಸಹಾಯಕರೊಂದಿಗೆ ಆಂಬ್ಯುಲೆನ್ಸ್ ನಿಮ್ಮ ಮನೆಗೆ ಬರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.