ಇಂದು ದೇಶದಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ. ಕರ್ನಾಟಕ ಸೇರಿ ದೇಶದ ಹಲವು ಕಡೆ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತಿದೆ.
ಮಕರ ಸಂಕ್ರಾಂತಿಯನ್ನು ಸಾಮಾನ್ಯವಾಗಿ ಜನವರಿ 14 ರಂದು ಆಚರಿಸಲಾಗುತ್ತದೆ. ಆದರೆ ಇಂದು ಈ ವರ್ಷ ಅಧಿಕ ವರ್ಷವಾಗಿರುವ ಕಾರಣ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತಿದೆ . ಜನವರಿ 15 ರಂದು ಒಟ್ಟು 10 ಗಂಟೆ 31 ನಿಮಿಷಗಳಷ್ಟು ಹೊತ್ತು ಪುಣ್ಯಕಾಲ ಇದೆ. ಈ ಕಾಲಾವಧಿಯು ಧಾರ್ಮಿಕ ಆಚರಣೆಗಳಲ್ಲಿ ತೊಡಗಲು, ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ಸೂರ್ಯ ದೇವರಿಗೆ ಗೌರವ ಸಲ್ಲಿಸಲು ಸೂಕ್ತ ಸಮಯವಾಗಿದೆ.
ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆ ಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. “ಮಕರ ವಿಳಕ್ಕು”ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ.
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು ಬೆಲ್ಲ”. ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳುಹಂಚುವುದು” ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು ಬೆಲ್ಲ” ತಯಾರಿಸಲಾಗುತ್ತದೆ.