ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಒಂದೊಂದು ರಾಜ್ಯದಲ್ಲೂ ಒಂದೊಂದು ಹೆಸರಿನಿಂದ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆಯಾ ಜಾತಿ, ಜನಾಂಗ, ಊರಿಗೆ ತಕ್ಕಂತೆ ಹಬ್ಬ ಆಚರಣೆ ಪದ್ಧತಿ ಕೂಡ ಭಿನ್ನವಾಗಿದೆ. ಮಕರ ಸಂಕ್ರಾಂತಿ ಹಿಂದುಗಳ ಮಹತ್ವದ ಹಬ್ಬಗಳಲ್ಲಿ ಒಂದು. ಈ ದಿನ ಎಳ್ಳು ಬೆಲ್ಲ ತಿಂದು ಎಲ್ಲರೂ ಖುಷಿಯಾಗಿರಲಿ ಎಂದು ಹರಸುವ ಸಮಯ. ಹಬ್ಬದ ಸಂದರ್ಭದಲ್ಲಿ ಜನರು ಬಣ್ಣ ಬಣ್ಣದ ಹೊಸ ಬಟ್ಟೆಯನ್ನು ಧರಿಸೋದು ಸಾಮಾನ್ಯ. ಮಕರ ಸಂಕ್ರಾಂತಿ ದಿನ ಕೂಡ ಎಲ್ಲ ಭಾಗದ ಜನರು ಬಣ್ಣ ಬಣ್ಣದ ಬಟ್ಟೆ ಧರಿಸುತ್ತಾರೆ. ಭಾರತದ ಕೆಲ ಭಾಗದಲ್ಲಿ ಸಂಕ್ರಾಂತಿ ಸಮಯದಲ್ಲಿ ಹಳದಿ ಬಟ್ಟೆಯನ್ನು ಧರಿಸುತ್ತಾರೆ. ಆದ್ರೆ ಪಶ್ಚಿಮ ಭಾರತದ ಪದ್ಧತಿ ಭಿನ್ನವಾಗಿದೆ. ಹಬ್ಬದ ಸಮಯದಲ್ಲಿ ಇಲ್ಲಿನ ಜನರು ಕಪ್ಪು ಬಟ್ಟೆಯನ್ನು ಧರಿಸುತ್ತಾರೆ.
ಕಪ್ಪು ಬಟ್ಟೆ ಧರಿಸಲು ಕಾರಣ : ನಿಮಗೆಲ್ಲ ತಿಳಿದಿರುವಂತೆ ಹಿಂದೂ ಧರ್ಮದ ಯಾವುದೇ ಹಬ್ಬಕ್ಕೆ ಕಪ್ಪು ಬಣ್ಣವನ್ನು ಧರಿಸುವುದಿಲ್ಲ. ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ರೆ ಮಕರ ಸಂಕ್ರಾಂತಿ ದಿನ ಸೂರ್ಯನು ಉತ್ತರ ದಿಕ್ಕಿಗೆ ಪ್ರವೇಶಿಸುವುದರಿಂದ ಕಪ್ಪು ಮಂಗಳಕರವೆಂದು ನಂಬಲಾಗಿದೆ. ಈ ದಿನ ವ್ಯಕ್ತಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದಗೆಡುವುದಿಲ್ಲ ಎಂದು ಅಲ್ಲಿನ ಜನರು ನಂಬುತ್ತಾರೆ.
ಮಕರ ಸಂಕ್ರಾಂತಿ ದಿನ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಮಕರ ಸಂಕ್ರಾಂತಿ ಶನಿಯ ಪ್ರಬಲ ಚಿಹ್ನೆ. ಕಪ್ಪು ಬಣ್ಣ ಶನಿಯೊಂದಿಗೆ ಸಂಬಂಧಿಸಿದೆ. ಹಾಗಾಗಿ ನೀವು ಈ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಬಹುದು.