ಕೆಲವು ದಿನಗಳ ಹಿಂದೆಯಷ್ಟೇ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು ಎಲ್ಲರಿಗೂ ನೆನಪಿದ್ದಿರಬಹುದು. ಇದೀಗ ಈ ಸಾಲಿಗೆ ಈರುಳ್ಳಿ ಸೇರಿಕೊಂಡಿದೆ. ಪ್ರತಿ ಕೆಜಿ ಈರುಳ್ಳಿ ದರ 70ರ ಗಡಿ ದಾಟಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿ ಈರುಳ್ಳಿಗೆ 25 ರೂಪಾಯಿ ಸಬ್ಸಿಡಿ ನೀಡಿ ಈರುಳ್ಳಿ ಮಾರಾಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ . ಹಿಂದಿನ ವರ್ಷ ಈ ಅವಧಿಯಲ್ಲಿ ಈರುಳ್ಳಿ ಬೆಲೆ ಒಂದು ಕೆಜಿಗೆ 30 ರೂಪಾಯಿ ಇತ್ತು. ಆದರೆ ಈ ವರ್ಷ ಕೆಜಿ ಈರುಳ್ಳಿ ಬೆಲೆ 47 ರೂಪಾಯಿಗೆ ಏರಿಕೆ ಕಂಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈರುಳ್ಳಿಯ ಬೆಲೆ ಶುಕ್ರವಾರದಂದು ಕೆಜಿಗೆ 40 ರೂಪಾಯಿ ಇತ್ತು. ಹಿಂದಿನ ವರ್ಷ ಇದೆ ಸಮಯದಲ್ಲಿ ಕೆಜಿಗೆ 30 ರೂಪಾಯಿ ಇತ್ತು ಎನ್ನಲಾಗಿದೆ. ಶನಿವಾರಂದು 1 ಕೆಜಿ ಈರುಳ್ಳಿ ದರ 65-80 ರೂಪಾಯಿ ಆಗಿದೆ ಎನ್ನಲಾಗಿದೆ. ಮದರ್ ಡೈರಿಯಲ್ಲಿ ಈರುಳ್ಳಿ ಕೆಜಿಗೆ 67 ರೂಪಾಯಿ ಆಗಿದ್ದರೆ ಬಿಗ್ ಬಾಸ್ಕೆಟ್ ಪ್ರತಿ ಕೆಜಿ ಈರುಳ್ಳಿಯನ್ನು 67 ರೂಪಾಯಿಗೆ ಮಾರುತ್ತಿದೆ. ಸ್ಥಳೀಯ ತರಕಾರಿ ವ್ಯಾಪಾರಿಗಳು ಪ್ರತಿ ಕೆಜಿ ಈರುಳ್ಳಿಯನ್ನು 80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಆಗಸ್ಟ್ ತಿಂಗಳ ಮಧ್ಯಭಾಗದಿಂದ ನಾವು ಬಫರ್ ಈರುಳ್ಳಿ ಆಫ್ ಲೋಡ್ ಮಾಡುತ್ತಿದ್ದೇವೆ. ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗದಂತೆ ತಡೆಯುವ ಸಲುವಾಗಿ ನಾವು ಚಿಲ್ಲರೆ ಮಾರಾಟವನ್ನು ಹೆಚ್ಚಿಸುತ್ತಿದ್ದೇವೆ. ಈವರೆಗೆ 22 ರಾಜ್ಯಗಳಲ್ಲಿ ಸುಮಾರು 1.7 ಲಕ್ಷ ಟನ್ ಬಫರ್ ಈರುಳ್ಳಿಯನ್ನು ಆಫ್ ಲೋಡ್ ಮಾಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈರುಳ್ಳಿ ಬೆಲೆ ಹೆಚ್ಚಾಗಲು ಕಾರಣವೇನು..?
ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿ ಖಾರಿಫ್ ಈರುಳ್ಳಿ ಬಿತ್ತನೆ ವಿಳಂಬವಾಗಿದೆ. ಹೀಗಾಗಿ ಮಾರುಕಟ್ಟೆಗೆ ಈರುಳ್ಳಿ ತಡವಾಗಿ ಬರುತ್ತಿದೆ. ಈಗ ಖಾರೀಫ್ ಈರುಳ್ಳಿಗಳು ಗಣನೀಯವಾಗಿ ಮಾರುಕಟ್ಟೆ ಪ್ರವೇಶ ಮಾಡಬೇಕಿತ್ತು. ಆದರೆ ಅದು ಬಾರದ ಹಿನ್ನೆಲೆಯಲ್ಲಿ ಈಗಾಗಲೇ ಸಂಗ್ರಹಿಸಿದ ರಬಿ ಈರುಳ್ಳಿಯನ್ನೇ ಖಾಲಿ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಈರುಳ್ಳಿ ಬೆಲೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.