ನಾಡಿಗೆಲ್ಲ ದೊಡ್ಡ ಹಬ್ಬ ನಾಗ ಪಂಚಮಿ. ಹೆಣ್ಣು ಮಕ್ಕಳಿಗೆ ಈ ಹಬ್ಬ ಸ್ವಲ್ಪ ವಿಶೇಷ ಅಂತಲೇ ಹೇಳಬಹುದು. ಈ ಹಬ್ಬ ಆಚರಿಸುವಾಗ ಹಿರಿಯರು ತುಸುಹೆಚ್ಚು ಎನ್ನಬಹುದಾದ ಕೆಲವು ನಿಯಮಗಳನ್ನು ಆಚರಣೆಗಳನ್ನು ಪಾಲಿಸಲು ಹೇಳುತ್ತಾರೆ. ನಾಗ ಪಂಚಮಿ ಬಹಳ ಶ್ರದ್ಧಾ ಭಕ್ತಿಯಿಂದ ನಿಷ್ಠೆಯಿಂದ ಆಚರಿಸುವ ಹಬ್ಬ. ಈ ದಿನ ಅಡುಗೆ ಮನೆಯಲ್ಲಿ ಯಾವುದೇ ಆಹಾರ ಪದಾರ್ಥವನ್ನು ಹುರಿಯುವ ಹಾಗಿಲ್ಲ, ಕರಿಯುವ ಹಾಗಿಲ್ಲ ಹಾಗೆ ಕೆಲವು ಮನೆಗಳಲ್ಲಂತೂ ತರಕಾರಿ ಹೆಚ್ಚುವುದಿಲ್ಲ, ಒಗ್ಗರಣೆಯೂ ಹಾಕುವುದಿಲ್ಲ.
ಇಷ್ಟೆಲ್ಲ ನಿಯಮ ಯಾಕೆ ಎಂಬ ಪ್ರಶ್ನೆ ಕಾಡಬಹುದು. ಕಾರಣವಿಷ್ಟೇ, ನಾಗ ಪಂಚಮಿಯ ದಿನ ಕೇವಲ ನಾಗಪ್ಪನನ್ನು ನಮಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಈ ದಿನ ಸಕಲ ಜೀವ ಜಂತುಗಳನ್ನು ಗೌರವಿಸುವ ದಿನ. ಈ ದಿನ ತಪ್ಪಿಯೂ ಯಾವುದೇ ಜಂತುಗಳಿಗೆ ತೊಂದರೆಯಾಗಬಾರದು. ತರಕಾರಿ ಹೆಚ್ಚುವಾಗ ಅಥವಾ ಆಹಾರವನ್ನು ಹುರಿಯುವಾಗ, ಕರಿಯುವಾಗ ಅಥವಾ ಕಾವಲಿಯ ಮೇಲೆ ಇಟ್ಟು ಬೇಯಿಸುವಾಗ ನಮಗೆ ತಿಳಿಯದಂತೆ ಯಾವುದಾದರೂ ಹುಳ ಹುಪ್ಪಟೆಗಳ ಜೀವಕ್ಕೆ ಹಾನಿಯಾಗಬಹುದು.
ಹಾಗಾಗಿ ಈ ದಿನ ಇಂತಹ ಎಲ್ಲಾ ಕೆಲಸಗಳಿಗೂ ಅಲ್ಪವಿರಾಮವನ್ನು ಹಾಕಲಾಗುತ್ತೆ. ಅದಕ್ಕೆಂದೇ ಸಾಕಷ್ಟು ಜನ ಈ ದಿನ ಉಪವಾಸವನ್ನು ಮಾಡುತ್ತಾ ಕೇವಲ ಫಲಹಾರವನ್ನು ಮಾತ್ರ ಸೇವಿಸುತ್ತಾರೆ. ಹಸಿ ತಂಬಿಟ್ಟು, ಚಿಗಳಿ, ಉಂಡೆಗಳಂತಹ ತಿನಿಸು ಈ ದಿನದ ವಿಶೇಷ. ನಮ್ಮ ಸಂಪ್ರದಾಯದಲ್ಲಿ ಪ್ರತಿ ಹಬ್ಬಕ್ಕೂ ಅದರದೇ ಆದ ರೀತಿ ನೀತಿ ನಿಯಮಾವಳಿಗಳಿವೆ ಹಾಗೂ ವಿಶೇಷ ಅರ್ಥವೂ ಇದೆ. ಅದನ್ನು ಅರಿತು ಪಾಲಿಸಿದರೆ ಹಬ್ಬದ ಆಚರಣೆ ಮತ್ತಷ್ಟು ಅರ್ಥಪೂರ್ಣವಾಗಬಹುದು.