ನವದೆಹಲಿ: ಹಿಂದೂ ದೇವತೆಯ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವ ಖಾತೆಯನ್ನು ಏಕೆ ನಿರ್ಬಂಧಿಸಬಾರದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆ ನಿಷೇಧ ಮಾಡಿದ್ದನ್ನು ಉಲ್ಲೇಖಿಸಿ ಟ್ವಿಟರ್ ಗೆ ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.
ಹಿಂದೂ ದೇವತೆಯ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಪ್ರಕಟಿಸಿದ ಖಾತೆಯ ವಿರುದ್ಧ ಸ್ವಯಂಪ್ರೇರಣೆಯಿಂದ ಕ್ರಮ ಕೈಗೊಳ್ಳದಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಸೋಮವಾರ ಟ್ವಿಟರ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ಯುಎಸ್ ಮೂಲದ ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಜನರ ಸಂವೇದನೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಕೋರ್ಟ್ ಹೇಳಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿರುವುದನ್ನು ಉಲ್ಲೇಖಿಸಿದ ಹೈಕೋರ್ಟ್, ಯಾವುದೇ ವ್ಯಕ್ತಿಯನ್ನು ನಿರ್ಬಂಧಿಸಲು ಮತ್ತು ನ್ಯಾಯಾಲಯದ ಆದೇಶದ ಅನುಪಸ್ಥಿತಿಯಲ್ಲಿ ಆಕ್ಷೇಪಾರ್ಹ ವಿಷಯದ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಟ್ವಿಟರ್ ನಿಲುವು ಸರಿಯಲ್ಲ ಎಂದು ಹೇಳಿದೆ.
ದೇವರ ಅವಹೇಳನ ಪೋಸ್ಟ್ ಗಳ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ನೇತೃತ್ವದ ಪೀಠ, ಇಂತಹ ಖಾತೆಗಳನ್ನು ನಿರ್ಬಂಧಿಸಲು ಕೈಗೊಂಡ ಕ್ರಮಗಳೇನು ಎಂಬುದನ್ನು ವಿವರಿಸಲು ಟ್ವಿಟರ್ಗೆ ಸೂಚಿಸಿದೆ.