ಕಳೆದ 9 ವರ್ಷಗಳಿಂದ ಪತಿ ರಿಷಿ ಸುನಕ್ ಜೊತೆಗೆ ಬ್ರಿಟನ್ ನಲ್ಲಿ ನೆಲೆಸಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ, ಸದ್ಯ ಭುಗಿಲೆದ್ದಿರುವ ತೆರಿಗೆ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ. ಎಲ್ಲ ಮೂಲದ ಆದಾಯಕ್ಕೂ ತಾವು ತೆರಿಗೆ ಪಾವತಿಸಲು ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ.
ಅಕ್ಷತಾ ಮೂರ್ತಿ ಅವರು ಭಾರತ ಮೂಲದ ಇನ್ಫೋಸಿಸ್ ಸಂಸ್ಥೆಯಲ್ಲಿ 0.9 ರಷ್ಟು ಶೇರುಗಳನ್ನು ಹೊಂದಿದ್ದು, ಇದರಿಂದ ಬರುವ ಆದಾಯಕ್ಕೆ ತೆರಿಗೆ ಉಳಿಸುವ ಸಲುವಾಗಿ ಬ್ರಿಟನ್ನಲ್ಲಿ ಕಳೆದ 9 ವರ್ಷಗಳಿಂದ ನೆಲೆಸಿದ್ದರೂ ಸಹ ನಿವಾಸಿಯೇತರ ಸ್ಥಾನಮಾನ ಹೊಂದಿದ್ದಾರೆ ಎಂದು ಬ್ರಿಟನ್ ನ ಪ್ರತಿಪಕ್ಷಗಳು ಆರೋಪಿಸಿದ್ದವು.
ಅಕ್ಷತಾ ಮೂರ್ತಿ ಅವರ ಪತಿ ರಿಷಿ ಸುನಕ್ ಬ್ರಿಟನ್ ಹಣಕಾಸು ಸಚಿವರಾಗಿದ್ದು, ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿದೆ. ಇದರ ಮಧ್ಯೆ ಈ ವಿವಾದ ಭುಗಿಲೆದ್ದ ಕಾರಣ ರಿಷಿ ಸುನಕ್ ಅವರಿಗೆ ಹಿನ್ನಡೆಯಾಗುವಂತಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿರುವ ಅಕ್ಷತಾ ಮೂರ್ತಿ, ಭಾರತದಲ್ಲಿ ಗಳಿಸಿದ ಆದಾಯವೂ ಸೇರಿದಂತೆ ತನ್ನ ಎಲ್ಲಾ ಆದಾಯಗಳಿಗೆ ಇಂಗ್ಲೆಂಡ್ನಲ್ಲಿ ತೆರಿಗೆ ಪಾವತಿಸುತ್ತೇನೆ ಎಂದು ಹೇಳಿದ್ದಾರೆ.