ಮತ್ತೆ ಭಾರತದಲ್ಲಿ ಕೊರೊನಾರ್ಭಟ ಶುರುವಾಗೋ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ಕೊರೊನಾದ ಹೊಸ ರೂಪ JN.1 ಆತಂಕವನ್ನೇ ಸೃಷ್ಟಿಸಿದೆ. ಇದು ಓಮಿಕ್ರಾನ್ ರೂಪಾಂತರಿ. ಅದಕ್ಕೆ ಹೋಲಿಸಿದ್ರೆ ಕೇವಲ ಒಂದು ಸ್ಪೈಕ್ ರೂಪಾಂತರವನ್ನು ಹೊಂದಿದೆ. ಆರಂಭಿಕ ಸಂಶೋಧನೆಗಳ ಪ್ರಕಾರ JN.1 ಕೂಡ ಓಮಿಕ್ರಾನ್‌ನಂತೆಯೇ ಹೆಚ್ಚು ಸಾಂಕ್ರಾಮಿಕವಾಗಿದೆ. ಆದರೆ ಅದರ ಲಕ್ಷಣಗಳು ಸೌಮ್ಯವಾಗಿರುತ್ತವೆ.
JN.1 ರೂಪಾಂತರದ ಸಾಮಾನ್ಯ ರೋಗ ಲಕ್ಷಣಗಳೆಂದರೆ ಕೆಮ್ಮು, ಶೀತ, ಗಂಟಲು ನೋವು ಮತ್ತು ಜ್ವರ. ಇದು ಸಾಮಾನ್ಯವಾಗಿ 4-5 ದಿನಗಳಲ್ಲಿ ಗುಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೊಟ್ಟೆ ನೋವು ಕೂಡ ಬರಬಹುದು. ಈ ಸೋಂಕಿಗೆ ತುತ್ತಾದ ಕೆಲವೇ ಕೆಲವರಲ್ಲಿ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿದೆ. ಈ ಪ್ರಕರಣಗಳು ಹೆಚ್ಚಾಗಿ ಸಿಂಗಾಪುರ, ಚೀನಾ ಮತ್ತು ಅಮೆರಿಕದಿಂದ ಬರ್ತಿವೆ.
ಕೊರೋನಾ ವೈರಸ್‌ನಲ್ಲಿ ಮತ್ತೆ ಮತ್ತೆ ರೂಪಾಂತರ ಏಕೆ ಸಂಭವಿಸುತ್ತದೆ ?
ಕೋವಿಡ್-19 ವೈರಸ್ ಈಗ JN.1 ಆಗಿದೆ. ವೈರಸ್ ಪುನರಾವರ್ತನೆಯ ಸಮಯದಲ್ಲಿ ತಪ್ಪು ಸಂಭವಿಸಿದಾಗ ರೂಪಾಂತರವಾಗುತ್ತದೆ. ಈ ತಪ್ಪು ವೈರಸ್‌ನ ಜೆನೆಟಿಕ್ ಕೋಡ್‌ನಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಕೊರೋನಾ ವೈರಸ್‌ನಲ್ಲಿ ರೂಪಾಂತರಗೊಳ್ಳಲು ಹಲವು ಕಾರಣಗಳಿರಬಹುದು. ಉದಾಹರಣೆಗೆ ವೈರಸ್‌ನ ಪುನರಾವರ್ತನೆಯ ಪ್ರಕ್ರಿಯೆ, ಇತರ ವೈರಸ್‌ಗಳೊಂದಿಗೆ ಸಂಪರ್ಕ ಅಥವಾ ಮಾನವ ಪ್ರತಿರಕ್ಷಣಾ ವ್ಯವಸ್ಥೆಯ ವಿರುದ್ಧ ಹೋರಾಡುವ ವೈರಸ್‌ನ ಸಂಪರ್ಕ. ಈ ಪ್ರಕ್ರಿಯೆಯಲ್ಲಿ ವೈರಸ್ ಹಾನಿಗೊಳಗಾಗಬಹುದು, ಇದು ರೂಪಾಂತರಕ್ಕೆ ಕಾರಣವಾಗಬಹುದು.
ರೂಪಾಂತರದ ನಂತರ ವೈರಸ್ ಅಪಾಯಕಾರಿಯಾಗುತ್ತದೆಯೇ ?
ರೂಪಾಂತರದ ನಂತರ ವೈರಸ್ ಅಪಾಯಕಾರಿಯಾಗಬಹುದು. ರೂಪಾಂತರಗಳು ವೈರಸ್‌ನ ಆನುವಂಶಿಕ ಸಂಕೇತದಲ್ಲಿನ ಬದಲಾವಣೆಗಳಾಗಿವೆ. ಈ ಬದಲಾವಣೆಗಳು ವೈರಸ್‌ನ ನಡವಳಿಕೆಯನ್ನು ಬದಲಾಯಿಸಬಹುದು. ಅದನ್ನು ಹೆಚ್ಚು ಸಾಂಕ್ರಾಮಿಕವಾಗಿಸಬಹುದು, ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು. ಅಸ್ತಿತ್ವದಲ್ಲಿರುವ ಲಸಿಕೆಗಳು ಮತ್ತು ಚಿಕಿತ್ಸೆಗಳಿಗೆ ನಿರೋಧಕವಾಗಬಹುದು.