ಕೊರೊನಾ ನಮ್ಮ ನಡುವೆ ವಾಸಿಸುತ್ತಲೇ ಇದ್ದು, ಬೀಡುಬಿಟ್ಟು ಸುಮಾರು 2 ವರ್ಷಗಳು ಆಗುತ್ತಿದೆ. ಈ ಸಾಂಕ್ರಾಮಿಕದ ಗಂಭೀರ ಅನಾರೋಗ್ಯದಿಂದ ಪಾರಾಗಲು ಸದ್ಯ ನಮ್ಮ ಬಳಿ ಇರುವ ಅಸ್ತ್ರ ಎಂದರೆ ’ಕೊರೊನಾ ತಡೆ ಲಸಿಕೆ’ (ವ್ಯಾಕ್ಸಿನ್) ಮಾತ್ರ.
ಆದರೆ ಈಗಲೂ ಹಲವು ಜನರು ಬಗೆಬಗೆಯ ಅಂಧಶ್ರದ್ಧೆಗಳು, ಮೌಢ್ಯತೆಗಳಿಗೆ ಗಂಟುಬಿದ್ದು ಲಸಿಕೆಯನ್ನು ಪಡೆಯಲು ಹಿಂಜರಿಯುತ್ತಿದ್ದಾರೆ. ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೇ ಜನರು ಲಸಿಕೆಯನ್ನು ಬೇಡ ಎನ್ನುತ್ತಿರುವುದು ನಿಜವಾಗಲೂ ಆತಂಕಕಾರಿ ಬೆಳವಣಿಗೆಯಾಗಿದೆ.
ಇಂಥವರ ಸಾಲಿಗೆ ಮತ್ತಷ್ಟು ಜನರು ಸೇರ್ಪಡೆ ಆಗಬಾರದು ಎಂಬ ಎಚ್ಚರಿಕೆಯಿಂದ ಕಾರ್ಟೂನ್ ಮೂಲಕ ಲಸಿಕೆಯ ಮಹತ್ವವನ್ನು ಸಾರಲಾಗಿದೆ. ’ಫ್ಯಾಮಿಲಿ ಗೈ’ (@FamilyGuyonFOX) ಎನ್ನುವ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿ ಪೀಟರ್ ಮತ್ತು ಆತನ ಸಾಕು ನಾಯಿ ಗ್ರಿಫ್ಫಿನ್ ನಡುವಿನ ಲಸಿಕೆ ಬಗೆಗಿನ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದೆ. ಕೊರೊನಾ ವೈರಾಣು ನಮ್ಮ ದೇಹ ಪ್ರವೇಶಿಸಿದಾಗ ಆಗುವ ಬದಲಾವಣೆಗಳು, ಅದಕ್ಕೂ ಲಸಿಕೆ ಪಡೆದಿದ್ದರೆ ಆಗುವ ಲಾಭಗಳ ಬಗ್ಗೆ ಕಾರ್ಟೂನ್ ಚಿತ್ರಗಳಲ್ಲಿ ವಿಶ್ಲೇಷಿಸಲಾಗಿದೆ.
‘ https://getvaccineanswers.org/ ‘ ಈ ವೆಬ್‌ಸೈಟ್‌ಗೆ ಭೇಟಿ ನೀಡಿ, ಲಸಿಕೆಗಳ ಬಗೆಗಿನ ಸಂಶಯಗಳನ್ನು ಕೂಡ ನಿವಾರಿಸಿಕೊಳ್ಳಲು ಅವಕಾಶವಿದೆ. ವರ್ಷಗಳಿಂದ ವಿಜ್ಞಾನಿಗಳು ವಿವಿಧ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇಂಥ ವ್ಯಾಕ್ಸಿನ್‌ನಿಂದಲೇ ’ಸಿಡುಬು’ ರೋಗ ಜಗತ್ತಿನಿಂದಲೇ ಕಣ್ಮರೆಯಾಗುವ ಹಂತ ಮುಟ್ಟಿದೆ ಎಂದು ಮೂರು ನಿಮಿಷಗಳ ವಿಡಿಯೊದಲ್ಲಿ ಚೆನ್ನಾಗಿ ವಿವರಿಸಲಾಗಿದೆ.