ಗಣೇಶನಿಗೆ ಸಿಹಿತಿಂಡಿಗಳು ಅಂದ್ರೆ ತುಂಬಾನೇ ಪ್ರೀತಿ ಅನ್ನೋದು ಎಲ್ರಿಗೂ ತಿಳಿದಿರೋ ವಿಚಾರ. ಹೀಗಾಗಿ ಗಣೇಶ ಹಬ್ಬ ಬಂತು ಅಂದ್ರೆ ಪ್ರತಿ ಮನೆ ಮನೆಯಲ್ಲಿ ಸಿಹಿ ತಿಂಡಿಗಳನ್ನ ಮಾಡಲಾಗುತ್ತೆ.
ಅದರಲ್ಲೂ ಗಣೇಶ ಹಬ್ಬದ ಮೊದಲ ದಿನದಂದು ಗಣಪತಿಗೆ 21 ಮೋದಕಗಳನ್ನು ಅರ್ಪಿಸೋದು ಪ್ರತೀತಿ. ಮೋದಕ ಇಲ್ಲದೇ ಗಣೇಶ ಹಬ್ಬ ಸಂಪೂರ್ಣವಾಗೋದೇ ಇಲ್ಲ. ಹಾಗಾದರೆ ಗಣಪತಿಗೆ ಮೋದಕ ಯಾಕೆ ಇಷ್ಟೊಂದು ಇಷ್ಟ ಎಂದು ಎಂದಾದರೂ ಯೋಚಿಸಿದ್ದೀರಾ..? ಇಲ್ಲ ಎಂದಾದಲ್ಲಿ ಈ ಸ್ಟೋರಿಯನ್ನು ಮಿಸ್ ಮಾಡ್ದೇ ಓದಿ.
ಒಂದು ಕತೆಯ ಪ್ರಕಾರ ಗಣೇಶನ ಅಜ್ಜಿ ಮೀನಾವತಿ ಅಂದರೆ ಪಾರ್ವತಿ ತಾಯಿ ಪ್ರತಿನಿತ್ಯ ಗಣಪತಿಗೆ ಲಡ್ಡು ಮಾಡಿಕೊಡುತ್ತಿದ್ದರಂತೆ. ದಿನದಿಂದ ದಿನಕ್ಕೆ ಗಣಪತಿ ಹೊಟ್ಟೆ ದೊಡ್ಡದಾಗುತ್ತಲೇ ಹೋಯ್ತು. ಇದರಿಂದ ಮೀನಾವತಿಗೆ ಪ್ರತಿನಿತ್ಯ ಗಣಪತಿಗೆ ರಾಶಿ ರಾಶಿ ಲಡ್ಡುಗಳನ್ನು ಮಾಡುವುದು ಕಷ್ಟವಾಯ್ತು. ಇದರಿಂದ ಮೀನಾವತಿ ಕೊಬ್ಬರಿ, ಬೆಲ್ಲ, ತುಪ್ಪವನ್ನ ಬಳಸಿ ಮೋದಕವನ್ನು ತಯಾರಿಸಲು ಆರಂಭಿಸಿದ್ರು. ಅಂದಿನಿಂದ ಲಡ್ಡು ಬಿಟ್ಟ ಗಣಪ ನಿತ್ಯ ಮೋದಕವನ್ನೇ ತಿನ್ನಲು ಆರಂಭಿಸಿದ. ಅಂದಿನಿಂದ ಮೋದಕವೇ ಗಣಪತಿಗೆ ಫೇವರಿಟ್ ಆಯ್ತು ಎಂಬ ನಂಬಿಕೆಯಿದೆ.
ಇನ್ನೊಂದು ಪುರಾಣದ ಪ್ರಕಾರ, ಗಣಪತಿ , ಶಿವ ಹಾಗೂ ಪಾರ್ವತಿ ಒಂದು ದಿನ ಋಷಿಗಳಾದ ಅತ್ರಿಯ ಪತ್ನಿ ಅನುಸೂಯಾ ನಿವಾಸಕ್ಕೆ ಭೇಟಿ ನೀಡುತ್ತಾರೆ. ಮೂವರಿಗೂ ಅನುಸೂಯಾ ಊಟ ಬಡಿಸುತ್ತಾರೆ. ಆದರೆ ಎಷ್ಟೇ ಬಡಿಸಿದರೂ ಗಣಪನ ಹೊಟ್ಟೆ ಮಾತ್ರ ತುಂಬೋದಿಲ್ಲ. ಇದರಿಂದ ಗೊಂದಲಕ್ಕೆ ಒಳಗಾದ ಅನುಸೂಯಾ ಕೊನೆಗೆ ಒಂದು ಪ್ಲಾನ್ ಮಾಡಿ ಮೋದಕವನ್ನು ತಯಾರಿಸುತ್ತಾರೆ. ಈ ಮೋದಕವನ್ನು ತಿಂದ ಬಳಿಕ ಗಣೇಶ ತೇಗುತ್ತಾನೆ. ಮತ್ತೊಂದು ಸಂಗತಿ ಅಂದರೆ ಮೋದಕ ತಿಂದ ಶಿವ 21 ಬಾರಿ ತೇಗುತ್ತಾನೆ. ಇದೇ ಕಾರಣಕ್ಕೆ ಗಣೇಶನಿಗೆ ಚೌತಿಗೆ 21 ಮೋದಕಗಳನ್ನು ನೀಡಲಾಗುತ್ತದೆ.