ನರಕ ಚತುರ್ದಶಿಯನ್ನು ( ಕಾಳಿ ಚೌದಾಸ್ , ನರಕ ಚೌದಾಸ್ , ರೂಪ್ ಚೌದಾಸ್ , ಚೋಟಿ ದೀಪಾವಳಿ , ನರಕ ನಿವಾರಣೆ ಚತುರ್ದಶಿ ಮತ್ತು ಭೂತ ಚತುರ್ದಶಿ ಎಂದೂ ಕರೆಯುತ್ತಾರೆ ) ಹಿಂದೂ ಪುರಾಣಗಳಲ್ಲಿ ಬಲಿ ಚಕ್ರವರ್ತಿ ಎಂದು ಕರೆಯಲ್ಪಡುವ ರಾಜನಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ.
ಈ ದಿನ, ಹಿಂದೂಗಳು ಬೆಳಗ್ಗೆ ಮುಂಚೆಯೇ ಎದ್ದೇಳುತ್ತಾರೆ. ಅಭ್ಯಂಗ ಅಂದರೆ ಇಡೀ ದೇಹ ಮತ್ತು ತಲೆಯನ್ನು ಎಣ್ಣೆಗಳಿಂದ ಹಚ್ಚಿ ನಂತರ ಸ್ನಾನ ಮಾಡುತ್ತಾರೆ. ಬಳಿಕ ಶುದ್ಧವಾದ ಬಟ್ಟೆಗಳನ್ನು ಧರಿಸಲಾಗುತ್ತದೆ. ಉಪಹಾರವನ್ನು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಆನಂದಿಸಲಾಗುತ್ತದೆ. ಸಂಜೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಮಧ್ಯಾಹ್ನದ ಊಟದ ಅಂಗವಾಗಿ ವಿಶೇಷ ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ. ಸಂಜೆಯ ಸಮಯದಲ್ಲಿ ಮನೆಗಳನ್ನು ಎಣ್ಣೆ ದೀಪಗಳಿಂದ ಬೆಳಗಿಸಲಾಗುತ್ತದೆ.
ಗೋವಾದಲ್ಲಿ , ಹುಲ್ಲಿನಿಂದ ತುಂಬಿದ ನರಕಾಸುರನ ಕಾಗದದಿಂದ ಮಾಡಿದ ಪ್ರತಿಕೃತಿಗಳನ್ನು ಮತ್ತು ದುಷ್ಟತನವನ್ನು ಸಂಕೇತಿಸುವ ಪಟಾಕಿಗಳನ್ನು ತಯಾರಿಸಲಾಗುತ್ತದೆ. ಈ ಪ್ರತಿಕೃತಿಗಳನ್ನು ಮುಂಜಾನೆ ಸುಡಲಾಗುತ್ತದೆ, ಪಟಾಕಿಗಳನ್ನು ಸಿಡಿಸಲಾಗುತ್ತದೆ ಮತ್ತು ಜನರು ಪರಿಮಳಯುಕ್ತ ಎಣ್ಣೆ ಸ್ನಾನ ಮಾಡಲು ಮನೆಗೆ ಮರಳುತ್ತಾರೆ. ದೀಪಗಳನ್ನು ಒಂದು ಸಾಲಿನಲ್ಲಿ ಬೆಳಗಿಸಲಾಗುತ್ತದೆ. ಮನೆಯ ಹೆಂಗಸರು ಪುರುಷರಿಗೆ ಆರತಿ ಮಾಡುತ್ತಾರೆ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಇತಿಹಾಸ
ನರಕ ಚತುರ್ದಶಿ ಹಬ್ಬವು ನರಕಾಸುರ ಎಂಬ ರಾಕ್ಷಸನಿಂದ ಈ ಹೆಸರನ್ನು ಪಡೆದು ಕೊಂಡಿದೆ ಎಂದು ಹೇಳಲಾಗುತ್ತದೆ. ನರಕಾಸುರನು ವಿಷ್ಣುವಿನ ಅವತಾರವಾದ ಭೂದೇವಿ ಮತ್ತು ವರಾಹ ದೇವರ ಮಗ. ಈತ ಬ್ರಹ್ಮ ದೇವರ ಬಳಿ ತನ್ನ ತಾಯಿ ಭೂದೇವಿಯನ್ನು ಹೊರತುಪಡಿಸಿ ಯಾರೂ ನನ್ನನ್ನು ಕೊಲ್ಲಬಾರದು ಎಂದು ವರ ಪಡೆದುಕೊಂಡಿರುತ್ತಾನೆ. ಆದರೆ ಅವನ ದುರಾಸೆ ಮತ್ತು ಅವನು ಮಾಡಿದ ಅನ್ಯಾಯದಿಂದಾಗಿ ಕೃಷ್ಣನ ಪತ್ನಿ ಸತ್ಯಭಾಮಾ ನರಕಾಸುರನನ್ನು ಕೊಂದಳು. ಹಾಗಾಗಿ ಸತ್ಯಭಾಮಾಳನ್ನು ಭೂದೇವಿಯ ಅವತಾರವೆಂದು ಭಾವಿಸಲಾಗಿತ್ತು. ನರಕಾಸುರನು ಸಾಯುವ ಮೊದಲು ಸತ್ಯಭಾಮಾದಿಂದ ಒಂದು ವರವನ್ನು ಬೇಡುತ್ತಾನೆ, ಅದು ಏನು ಅಂದರೆ ತನ್ನನ್ನು ಜನರು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. ಅಂತಹ ಒಂದು ವರ ಕೊಡು ಎಂದು ಕೇಳಿಕೊಳ್ಳುತ್ತಾನೆ, ಹಾಗಾಗಿ ನರಕ ಚತುರ್ದಶಿ ಹಬ್ಬವನ್ನು ನರಕಾಸುರನ ಮರಣದ ನೆನಪಿಗಾಗಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ.
ನರಕ ಚತುರ್ದಶಿ ದಿನದಂದು ಯಮ ದೇವನನ್ನು ಪೂಜಿಸುವುದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಕಾಲಿಕ ಮರಣದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ.